ಅಜ್ಜರಕಾಡು ಸರಕಾರಿ ಕಾಲೇಜಿನ ಶಿಬಿರದಲ್ಲಿ 34 ಯೂನಿಟ್ ರಕ್ತ ಸಂಗ್ರಹ

ಉಡುಪಿ, ಅ.23: ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಾಲೇಜಿನ ಯುವ ರೆಡ್ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್), ರೇಂಜರ್ಸ್ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ(ಐಕ್ಯೂಎಸಿ) ಸಹಯೋಗದಲ್ಲಿ ಉಡುಪಿ ಜಿಲ್ಲಾ ರೆಡ್ಕ್ರಾಸ್ ಸಂಸ್ಥೆ, ಕುಂದಾಪುರ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಮಿಡ್ಟೌನ್ ಉಡುಪಿ ಸಹಕಾರ ದೊಂದಿಗೆ ಶುಕ್ರವಾರ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 34 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಶಿಬಿರವನ್ನು ಉದ್ಘಾಟಿಸಿದ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ ಮಾತನಾಡಿ, ಉತ್ತಮ ಆಹಾರ ಪದ್ಧತಿಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದೇಹ ಆರೋಗ್ಯ ವಾಗಿದ್ದರೆ ಮನಸ್ಸೂ ಆರೋಗ್ಯವಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ತಿಳಿಸಿದರು.
ಉಡುಪಿ ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ರಕ್ತದಾನವು ಅತ್ಯಂತ ಮಹತ್ವದ ದಾನವಾಗಿದ್ದು, ಅಗತ್ಯವಿರುವವರಿಗೆ ರಕ್ತ ನೀಡಿ ಜೀವ ಉಳಿಸಲು ಸಾಧ್ಯವಿದೆ. ರಕ್ತದಾನದ ಬಗ್ಗೆ ಜನರಲ್ಲಿರುವ ಭಯ ಮತ್ತು ತಪ್ಪು ಕಲ್ಪನೆಗಳನ್ನು ದೂರ ಮಾಡಬೇಕು. ನಮಗೆ ಅಥವಾ ನಮ್ಮ ಆಪ್ತರಿಗೆ ರಕ್ತದ ಅವಶ್ಯಕತೆ ಎದುರಾದಾಗ ರಕ್ತದಾನದ ಮಹತ್ವ ಅರಿವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ನಿಕೇತನ ವಹಿಸಿದ್ದರು. ಲಯನ್ಸ್ ಮಿಡ್ಟೌನ್ ಉಡುಪಿಯ ಅಧ್ಯಕ್ಷ ಡಾ. ರಾಮಚಂದ್ರ ಪಾಟ್ಕರ್, ಕಾರ್ಯದರ್ಶಿ ಜೀವನ್ದಾಸ್ ಶೆಟ್ಟಿ, ಭಾರತೀಯ ರೆಡ್ಕ್ರಾಸ್ ಸೊಸೈಟಿ ಕುಂದಾಪುರ ಘಟಕದ ಕೋಶಾಧಿಕಾರಿ ಶಿವರಾಮ ಶೆಟ್ಟಿ, ಯುವ ರೆಡ್ಕ್ರಾಸ್ ಕಾರ್ಯಕ್ರಮಾಧಿಕಾರಿ ಕವಿತಾ, ರೇಂಜರ್ಸ್ ನಾಯಕಿ ಅಶ್ವಿಜಾ, ಸಹಾಯಕ ಪ್ರಾಧ್ಯಾಪಕ ಡಾ.ರವೀಶ ಬಿ., ಪುನೀತ್ ತೆಂಡೂಲ್ಕರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಭಾರ್ಗವಿ ಕಾರ್ಯಕ್ರಮ ನಿರೂಪಿಸಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ರಾಕೇಶ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ರಾಜೇಂದ್ರ ಕೆ. ವಂದಿಸಿದರು.
ಕಾಲೇಜಿನ ಗ್ರಂಥಪಾಲಕ (ಆಯ್ಕೆ ಶ್ರೇಣಿ) ವೆಂಕಟೇಶ್ 39ನೇ ಬಾರಿ, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶರತ್ ಕುಮಾರ್ 33ನೇ ಬಾರಿ, ಉಪನ್ಯಾಸಕಿ ಸ್ಮಿತಾ 22 ಬಾರಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಯತೀಶ್ ಕುಮಾರ್ 20ನೇ ಬಾರಿ ರಕ್ತದಾನ ಮಾಡಿದರು. ಬೋಧಕೇತರ ಸಿಬ್ಬಂದಿ ತುಳಸಿ ರಕ್ತದಾನದಲ್ಲಿ ಪಾಲ್ಗೊಂಡರು.






