‘ಬಾಧಿತ 35 ಗ್ರಾಮಗಳಲ್ಲೂ ಗ್ರಾಮಸಭೆ ನಡೆಸಿ ಜನರಿಗೆ ಮಾಹಿತಿ ನೀಡಿ’

ಕುಂದಾಪುರ, ಆ.17: ಕೇವಲ ಸಭೆ, ಹೋರಾಟಗಳಿಂದ ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ವರದಿಯಿಂದ ಬಾಧಿತವಾಗುವ, ಸಮಸ್ಯೆಗೆ ಗುರಿಯಾದ ಪ್ರದೇಶದ ಎಲ್ಲ 35 ಗ್ರಾಮಗಳಲ್ಲಿ ಗ್ರಾಮಸಭೆಗಳು ನಡೆಸಿ, ಅಲ್ಲಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ, ಮಾಹಿತಿ ಪಡೆದು, ನಿರ್ಣಯ ಕೈಗೊಂಡು, ಅದನ್ನು ಸರಕಾರಕ್ಕೆ ತಲುಪಿ ಸುವ ಕಾರ್ಯ ಆಗಬೇಕು ಎಂದು ವಿಧಾನಪರಿಷತ್‌ನ ಮಾಜಿ ಸಭಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಪ್ರತಾಪ್ಚಂದ್ರ ಶೆಟ್ಟಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ರೈತ ಸಂಘದ ವತಿಯಿಂದ ಕುಂದಾಪುರದ ದಿ.ಕುಶಲ ಹೆಗ್ಡೆ ಮೆಮೋರಿಯಲ್ ಹಾಲ್‌ನಲ್ಲಿ ಇಂದು ಸಂಜೆ ಆಯೋಜಿಸಲಾದ ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆ ಕುರಿತು ನಡೆದ ಚರ್ಚೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತಿದ್ದರು.
ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿಷಯದಲ್ಲಿ ಅರಣ್ಯ ಇಲಾಖೆ- ಪರಿಸರ ಇಲಾಖೆ ಮಧ್ಯೆ ಗೊಂದಲವಿದೆ. ಇದನ್ನು ಸರಕಾರ ಪರಿಹರಿಸಬೇಕು. ಈ ವಿಷಯದಲ್ಲಿ ರೈತ ಸಂಘ ಯಾವತ್ತೂ ಬಾಧಿತರ ಪರವಾಗಿರಲಿದೆ ಎಂದವರು ನುಡಿದರು.
ಕೇರಳದ ಸಮೀಕ್ಷಾ ವರದಿಗೆ ಒಪ್ಪಿಗೆ: ಸೋಮೇಶ್ವರ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಮಾತನಾಡಿ, ರಾಜ್ಯದ ಪರಿಸರ ಸೂಕ್ಷ್ಮ ವಲಯದಲ್ಲಿ ಮಾಡಿರುವ ನೋಟಿಫಿಕೇಶನ್‌ನ ಭೌತಿಕ ಸಮೀಕ್ಷೆ ಇನ್ನೂ ಆಗಿಲ್ಲ. ಕೇರಳದಲ್ಲಿ ಸಂಪೂರ್ಣವಾಗಿ ಅಕ್ಷಾಂಶ ಮತ್ತು ರೇಖಾಂಶ ಆಧಾರದ ಮೇಲೆ ಭೌತಿಕ ಸಮೀಕ್ಷೆ ನಡೆಸಿ ಪರಿಸರ ಸೂಕ್ಷ್ಮ ವಲಯ ಗಡಿಯನ್ನು ಗುರುತು ಮಾಡಿ, ನಿರ್ಣಯದೊಂದಿಗೆ ಕೇಂದ್ರ ಸರಕಾರಕ್ಕೆ ಕಳುಹಿಸಿಸಲಾಗಿದೆ. ಕೇಂದ್ರ ಸರಕಾರ ಇದನ್ನು ಪುರಸ್ಕರಿಸಿದೆ ಎಂದರು.
ಪರಿಸರ ಸೂಕ್ಷ್ಮ ವಲಯ ನೋಟಿಫಿಕೇಶನ್ ಬೇಡ ಎಂಬ ನಿಲುವನ್ನು ನಮ್ಮ ರಾಜ್ಯದ ಹಿಂದಿನೆಲ್ಲಾ ಸರಕಾರಗಳು ನಿಲುವು ತಳೆದಿದ್ದವು. ಸರಕಾರಗಳು ಪರಿಸರ ಸೂಕ್ಷ್ಮ ವಲಯ ನೋಟಿಫಿಕೇಶನ್‌ನ್ನು ಸಾರಾಸಗಟಾಗಿ ತಿರಸ್ಕಾರ ಮಾಡಿರುವ ಹಿನ್ನಲೆಯಲ್ಲಿ ನಮ್ಮಲ್ಲಿ ಈವರೆಗೆ ಭೌತಿಕ ಸಮೀಕ್ಷೆ ಆಗಿಲ್ಲ ಎಂದು ದಿನೇಶ್ ವಿವರಿಸಿದರು.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಪೈಕಿ ಯಾವುದೇ ಇಲಾಖೆ ನೋಟಿಫಿಕೇಶನ್ ಮಾಡಿದರೂ ಅದು ಅರಣ್ಯ ಇಲಾಖೆ ಮಾಡಿದ ನೋಟಿಫಿಕೇಶನ್ ಎಂದು ಹೇಳಲಾಗುತ್ತದೆ. ಪರಿಸರ ಇಲಾಖೆಯಿಂದ ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲಾಗಿದ್ದು, ಇದರಲ್ಲಿ ಅರಣ್ಯ ಅಧಿಕಾರಿಗಳ ಯಾವುದೇ ಪಾತ್ರ ಇರುವುದಿಲ್ಲ. ಈ ಹಿಂದಿನ ಕರಡು ಅಧಿಸೂಚನೆಗೂ ಮತ್ತು ಇಂದಿನ ಅಧಿಸೂಚನೆಯಲ್ಲಿ ಗ್ರಾಮಗಳ ವ್ಯತ್ಯಾಸವಾಗಿರುವುದು ಬಿಟ್ಟರೆ ಉಳಿದೆಲ್ಲವೂ ಹಾಗೇ ಇದೆ. ಪರಿಸರ ಸೂಕ್ಷ್ಮ ವಲಯದಲ್ಲಿ ಆಗಬೇಕಾದ ಅಭಿವೃದ್ಧಿ ಬಗ್ಗೆ ಪ್ರವಾಸೋದ್ಯಮ ಇಲಾಖೆ ಕ್ರಿಯಾ ಯೋಜನೆ ತಯಾರಿಸಿ ಒಪ್ಪಿಗೆ ಪಡೆದುಕೊಳ್ಳಬೇಕಿದೆ, ಇದಕ್ಕೆ ಮಾಸ್ಟರ್ ಪ್ಲಾನ್ ರೂಪಿಸಬೇಕು ಎಂದರು.
ರೈತ ಸಂಘದ ಮುಖಂಡ ಸತೀಶ ಕಿಣಿ ಬೆಳ್ವೆ ಮಾತನಾಡಿ, ಕಸ್ತೂರಿ ರಂಗನ್ ವರದಿಯ ಈ ಹಿಂದಿನ ಎಲ್ಲಾ 6 ಕರಡು ಅಧಿಸೂಚನೆಯನ್ನು ರಾಜ್ಯ ಸರಕಾರ ತಿರಸ್ಕರಿಸಿದ್ದು, ಕಸ್ತೂರಿ ರಂಗನ್ ವರದಿಯ ವಿಚಾರದಲ್ಲಿ ರಾಜ್ಯ ಸರಕಾರಗಳ ಲೋಪ ಇದರಲ್ಲಿ ಎದ್ದು ಕಾಣುತ್ತಿದೆ. ಉಡುಪಿ ಜಿಲ್ಲೆಯ 35 ಗ್ರಾಮಗಳನ್ನು ಈ ವ್ಯಾಪ್ತಿಗೆ ತರಲಾಗಿದ್ದು, ಇದು ಅರಣ್ಯವನ್ನು ಅಥವಾ ಪಶ್ಚಿಮ ಘಟ್ಟವನ್ನು ಉಳಿಸಲು ತಯಾರಿಸಿದ ವರದಿಯೋ ಅಥವಾ ಜನರಿಗೆ ತೊಂದರೆ ನೀಡಲು ಮಾಡಿದ ವರದಿಯೋ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಂಡ್ಸೆ ಗ್ರಾಪಂನ ಮಾಜಿ ಅಧ್ಯಕ್ಷ ಉದಯಕುಮಾರ ಶೆಟ್ಟಿ ಮಾತನಾಡಿ, ಕಸ್ತೂರಿ ರಂಗನ್ ವರದಿ ತಯಾರಿಸುವ ಸಂದರ್ಭ ಭೌತಿಕ ಸಮೀಕ್ಷೆ ನಡೆಸಿಲ್ಲ. ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದರೂ, ಕಸ್ತೂರಿ ರಂಗನ್ ವರದಿ ಬಾಧಿತ ಪ್ರದೇಶಗಳಲ್ಲಿ ಪಂಚಾಯತ್ ಮಟ್ಟದಲ್ಲಿ ಸಭೆ ಕೂಡ ನಡೆಸಿಲ್ಲ. ಪರಿಸರ ಸೂಕ್ಷ್ಮ ವಲಯದಲ್ಲಿರುವ ಪ್ರದೇಶಗಳು ಕಸ್ತೂರಿ ರಂಗನ್ ವರದಿಯಲ್ಲಿ ಇಲ್ಲ. ಪರಿಸರ ಸೂಕ್ಷ್ಮ ವಲಯದಿಂದ ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.
ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ಮಾತನಾಡಿ, ಕಸ್ತೂರಿ ರಂಗನ್ ವರದಿ ಬಗ್ಗೆ ಬಹುತೇಕರಿಗೆ ಹೆಚ್ಚಿನ ಮಾಹಿತಿ ಇಲ್ಲ. ನಾವುಂದ ಗ್ರಾಮವನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರ್ಪಡೆ ಗೊಳಿಸಲಾಗಿದೆ. ಯಾವೆಲ್ಲಾ ಪ್ರದೇಶ ಈ ವ್ಯಾಪ್ತಿಗೆ ಒಳಪಡುತ್ತಿದೆ, ಇದರ ಮಾನದಂಡವೇನು ಎಂದು ಕೇಳಿದರೆ ಯಾರಿಗೂ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ, ಮಾಜಿ ಶಾಸಕ ಕೆ.ಪ್ರತಾಪಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ವನ್ಯಜೀವಿ ವಿಭಾಗದ ಡಿಎಫ್‌ಒ ಕಿರಣ್ ಬಾಬು, ಕುಂದಾಪುರದ ಆರ್‌ಎಫ್‌ಒ ರಾಘವೇಂದ್ರ ನಾಯ್ಕ್, ರೈತ ಮುಖಂಡರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಡಾ.ಅತುಲ್ ಕುಮಾರ್ ಶೆಟ್ಟಿ, ದಿನೇಶ ಹೆಗ್ಡೆ ಮೊಳಹಳ್ಳಿ, ಕೆದೂರು ಸದಾನಂದ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಸೀತಾರಾಮ ಗಾಣಿಗ, ಪ್ರದೀಪ ಯಡಿಯಾಳ, ಪ್ರಭಾಕರ ಶೆಟ್ಟಿ, ಪ್ರದೀಪ ಬಲ್ಲಾಳ್, ಮತ್ತಿತರರು ಉಪಸ್ಥಿತರಿದ್ದರು.
ಪರಿಸರ ಸೂಕ್ಷ್ಮ ವಲಯದಲ್ಲಿ ನಿರ್ಬಂಧ
ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ವಲಯದಲ್ಲಿ ರೈತ ವರ್ಗದ ಕೈಮೀರಿ ನಡೆಯುತ್ತಿರುವ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಸುಪ್ರೀಕೋರ್ಟ್ ಆದೇಶದ ಮೇರೆಗೆ 10 ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಿದ್ದು, ಜನವಸತಿ ಪ್ರದೇಶಗಳಲ್ಲಿ ಇದರ ಮಿತಿಯನ್ನು ಒಂದು ಕಿ.ಮೀ.ಗೆ ಇಳಿಸಲಾಗಿದೆ. ಅರಣ್ಯ ಪ್ರದೇಶಕ್ಕೆ ತಾಗಿರುವ ಗ್ರಾಮಗಳಲ್ಲಿ ಇದರ ಮಿತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ.
ಪರಿಸರ ಸೂಕ್ಷ್ಮ ವಲಯದಲ್ಲಿ 50 ಸೆಂಟ್ಸ್ ತನಕದ ಜಾಗದಲ್ಲಿ ಮನೆ ಕಟ್ಟಲು ಯಾವುದೇ ಅನುಮತಿ ಬೇಕಿಲ್ಲ ಎಂದು ಸಮಿತಿಯಲ್ಲಿ ತೀರ್ಮಾನ ಮಾಡಬೇಕಿದೆ. ಇದನ್ನು ಮಾಡಲು ಕಾನೂನಿನಲ್ಲಿ ಅವಕಾಶ ಇದ್ದು, ಇದನ್ನು ಮಾಡುವ ಇಚ್ಛಾಶಕ್ತಿ ಇರಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಹೇಳಿದರು.
‘ಕಸ್ತೂರಿ ರಂಗನ್ ಜಾರಿ ಆತಂಕ ಬೆಂಗಳೂರಿನಂತಹ ನಗರಗಳಿಗೆ ಇದ್ದಿದ್ದರೆ, ಸರಕಾರವೂ ಗಂಭೀರವಾಗಿ ಪರಿಗಣಿ ಸುತ್ತಿತ್ತು. ಆದರೆ ಇದು ಆಗುತ್ತಿರುವುದು ರಾಜಧಾನಿಯಿಂದ ದೂರದ ಕರಾವಳಿ, ಮಲೆನಾಡು ಭಾಗವಾದ್ದ ರಿಂದ ಇನ್ನೂ ಬಗೆಹರಿದಿಲ್ಲ. 10-15 ವರ್ಷಗಳಿಂದ ಕಸ್ತೂರಿ ರಂಗನ್ ವರದಿ ಕುರಿತು ಅನೇಕ ಸಭೆ, ಹೋರಾಟ ನಡೆದಿದ್ದರೂ ಇನ್ನೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ. ಅದೇ ಮರಳು ಸಮಸ್ಯೆ ಬಂದಾಗ ಎಷ್ಟು ಬಾರಿ ಬೇಕಾದರೂ ಬೆಂಗಳೂರಿಗೆ ಹೋಗುವ ನಮಗೆ ಕಸ್ತೂರಿ ರಂಗನ್ ವರದಿ ಕುರಿತು ಸರಕಾರಕ್ಕೆ ಮನವರಿಕೆ ಮಾಡುವ ಕಳಕಳಿ ಇಲ್ಲ. ಮೂಲಭೂತವಾಗಿ ಬೆಟ್ಟಗಳನ್ನು ಸಂರಕ್ಷಣೆ ಮಾಡಲು ಈ ವರದಿ ಜಾರಿ, ಪರಿಸರ ರಕ್ಷಣೆ ಎಂದು ಹೇಳಲಾಗುತ್ತದೆ. ಆದರೆ ಈ ಘಾಟಿ ಕುಸಿತ ಗುಡ್ಡ ಕುಸಿತ, ಭೂಕುಸಿತಗಳೆಲ್ಲ ಸರಕಾರದ ಅವೈಜ್ಞಾನಿಕ ಕಾಮಗಾರಿಗಳಿಂದ ಆಗಿದ್ದು, ರೈತರಿಂದ ಅಲ್ಲʼ.
-ಕೆ.ಪ್ರತಾಪಚಂದ್ರ ಶೆಟ್ಟಿ, ಜಿಲ್ಲಾ ರೈತ ಸಂಘದ ಅಧ್ಯಕ್ಷ






