ಉಡುಪಿ ರನ್ನರ್ಸ್ ಕ್ಲಬ್‌ನಿಂದ ‘ಡ್ರಗ್-ಫ್ರಿ ಉಡುಪಿ ರನ್’ ; 350ಕ್ಕೂ ಅಧಿಕ ಮಂದಿ ಭಾಗಿ

ಉಡುಪಿ, ಸೆ.20: ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಹಾಗೂ ಯುವಜನರನ್ನು ವ್ಯಸನ ಮುಕ್ತ, ಆರೋಗ್ಯಕರ ಜೀವನದತ್ತ ಪ್ರೇರೇಪಿಸುವ ಉದ್ದೇಶದಿಂದ ಉಡುಪಿ ರನ್ನರ್ಸ್ ಕ್ಲಬ್ ವತಿಯಿಂದ ಉಡುಪಿ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಶನಿವಾರ ರಾತ್ರಿ ‘ಡ್ರಗ್-ಫ್ರಿ ಉಡುಪಿ’ ಸಂದೇಶದೊಂದಿಗೆ ಯುಆರ್‌ಸಿ ನೈಟ್ ರನ್-2026ನ್ನು ಆಯೋ ಜಿಸಲಾಗಿತ್ತು.
ಉಡುಪಿ, ಮಂಗಳೂರು, ಕುಂದಾಪುರ, ಕುಮಟಾ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ 350ಕ್ಕೂ ಅಧಿಕ ರನ್ನರ್‌ಗಳು ನೈಟ್ ರನ್‌ನಲ್ಲಿ ಉತ್ಸಾಹದಿಂದ ಪಾಲ್ಗೊಂಡು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಸಂದೇಶ ಸಾರಿದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಹಾಗೂ ಉಡುಪಿ ರನ್ನರ್ಸ್ ಕ್ಲಬ್‌ನ ಗೌರವಾಧ್ಯಕ್ಷ ಯಶಪಾಲ್ ಸುವರ್ಣ, ಕಾರ್ಕಳ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತ್ತಾ ಉಡುಪಿ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜೇಶ್ ಹೆಗ್ಡೆ ಉಪಸ್ಥಿತರಿದ್ದರು.
ಉಡುಪಿ ರನ್ನರ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಸಾಲ್ಯಾನ್ ಹಾಗೂ ಕಾರ್ಯದರ್ಶಿ ಲ್ಯಾನ್ಸಿ ಮೆಂಡೋನ್ಸಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಯುವಜನರ ಭವಿಷ್ಯವನ್ನು ರಕ್ಷಿಸಲು ಸಮಾಜದ ಪ್ರತಿಯೊಬ್ಬರೂ ಮಾದಕ ವಸ್ತುಗಳ ವಿರುದ್ಧ ದೃಢ ನಿಲುವು ತಾಳ ಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು. ಯುವಜನರು ಉತ್ತಮ ಗುರಿ ಮತ್ತು ಆರೋಗ್ಯಕರ ಜೀವನದತ್ತ ಸಾಗಲು ಸಮಾಜವು ಬೆಂಬಲ ನೀಡಬೇಕು ಎಂದು ಕರೆ ನೀಡಲಾಯಿತು.
ಕಾರ್ಯಕ್ರಮದ ಪ್ರಮುಖ ಘಟ್ಟವಾಗಿ ಇಶಿತಾ ಗುಪ್ತಾ ನೇತೃತ್ವದಲ್ಲಿ ‘ಡ್ರಗ್-ಫ್ರಿ ಉಡುಪಿ’ ಪ್ರತಿಜ್ಞಾ ಸ್ವೀಕಾರ ನಡೆಯಿತು. ರನ್ನರ್‌ಗಳು ಹಾಗೂ ಸಾರ್ವಜನಿಕರು ಮಾದಕ ವಸ್ತುಗಳಿಂದ ದೂರವಿದ್ದು, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವ ಸಂಕಲ್ಪ ಮಾಡಿದರು.






