ಕುಂದಾಪುರ | 43ನೇ ಸ್ವಚ್ಛ ಕಡಲ ತೀರ-ಹಸಿರು ಕೋಡಿ ಅಭಿಯಾನ

ಕುಂದಾಪುರ, ನ.15: ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ 43ನೇ ಸ್ವಚ್ಛ ಕಡಲ ತೀರ - ಹಸಿರು ಕೋಡಿ ಅಭಿಯಾನವು ಶನಿವಾರ ಯಶಸ್ವಿಯಾಗಿ ನೆರವೇರಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ 14 ವರ್ಷದೊಳಗಿನ ಎಐಸಿಎಸ್ ಅಂತರ ಕಾಲೇಜು ಫುಟ್ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು, ಸಂಸ್ಥೆ ಹಾಗೂ ನಮ್ಮ ಸತತ ಪ್ರಯತ್ನಕ್ಕೆ ಬೆಲೆ ದೊರೆತಿದೆ ಎಂದು ತಿಳಿಸಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯ ಡಾ.ಆಸಿಫ್ ಬ್ಯಾರಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿಕೊಳ್ಳಿ. ಅದಕ್ಕೆ ಬೇಕಾಗುವ ವೇದಿಕೆಯನ್ನು ಬ್ಯಾರೀಸ್ ಶಿಕ್ಷಣ ಸಂಸ್ಥೆ ನೀಡುತ್ತದೆ ಎಂದರು.
ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಬ್ಯಾರಿ ಮಾತನಾಡಿ, ಸಾಲುಮರದ ತಿಮ್ಮಕ್ಕನವರ ಜೀವನ ಎಲ್ಲಾ ಮಕ್ಕಳಿಗೂ ಆದರ್ಶವಾಗಬೇಕು. ನಮ್ಮ ಸ್ವಚ್ಛತಾ ಅಭಿಯಾನವು ನಿರಂತರವಾಗಿ ಸಾಗಲಿದೆ ಎಂದು ತಿಳಿಸಿದರು.
ಹಾಜಿ ಕೆ.ಮುಹಿಯುದ್ದೀನ್ ಬ್ಯಾರಿ ಅನುದಾನಿತ ಪ್ರೌಢಶಾಲೆಯ ಪ್ರಾಂಶುಪಾಲೆ ಡಾ.ಜಯಶೀಲ ಶೆಟ್ಟಿ ಸಾಲುಮರದ ತಿಮ್ಮಕ್ಕರ ಅದ್ಭುತ ಯಶೋಗಾಥೆಯನ್ನು ಸ್ಮರಿಸಿ, ಎಲ್ಲರೂ ಮಹಾನ್ ಚೇತನಕ್ಕೆ ಮೌನಾಚರಣೆಗೈದು, ಭಾವಪೂರ್ಣ ಸಂತಾಪ ವ್ಯಕ್ತಪಡಿಸಿದರು.
ಅಭಿಯಾನದಲ್ಲಿ ಸಲಹಾ ಮಂಡಳಿಯ ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಹಾಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ, ಹಿತೈಷಿಗಳ ಬಳಗ, ಪೋಷಕರು, ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಬ್ಯಾರೀಸ್ ಬಿ.ಎಡ್ ಕಾಲೇಜಿನ ಪ್ರಶಿಕ್ಷಣಾರ್ಥಿ ಸ್ವಾತಿ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ, ವಂದಿಸಿದರು.







