ಶಾಲಾ-ಕಾಲೇಜು ವಾಹನಗಳ ವಿಶೇಷ ತಪಾಸಣೆ| 43 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ: ದಂಡ ವಸೂಲಿ

ಉಡುಪಿ, ಜು.28: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಶಾಲಾ ಮಕ್ಕಳ ಸುರಕ್ಷತೆಯನ್ನು ದೃಷ್ಟಿಯಲ್ಲಿ ಜು.20ರಿಂದ 27ರವರೆಗೆ ಜಿಲ್ಲೆಯಾದ್ಯಂತ ಶಾಲಾ-ಕಾಲೇಜು ವಾಹನಗಳ ವಿಶೇಷ ತಪಾಸಣೆ ಹಾಗೂ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಈ ಅವಧಿಯಲ್ಲಿ ರಸ್ತೆಗಳಲ್ಲಿ ನಡೆಸಿದ ವಿಶೇಷ ವಾಹನ ತಪಾಸಣೆಯಲ್ಲಿ ಒಟ್ಟು 204 ಬಸ್‌ಗಳು, 69 ಮಿನಿ ಬಸ್ ಗಳು, 65 ಆಟೋರಿಕ್ಷಾಗಳು ಹಾಗೂ 33 ಕಾರುಗಳು ಸೇರಿದಂತೆ ವಿವಿಧ ಶಾಲಾ ವಾಹನಗಳನ್ನು ಪರಿಶೀಲಿಸ ಲಾಯಿತು. ತಪಾಸಣೆಯ ವೇಳೆ 29 ವಾಹನಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸಾಗಿಸುತ್ತಿರುವುದು, 5 ವಾಹನಗಳಲ್ಲಿ ಚಾಲಕರು ಸಮವಸ್ತ್ರ ಧರಿಸದೇ ವಾಹನ ಚಾಲನೆ ಮಾಡುತ್ತಿರುವುದು ಸೇರಿದಂತೆ 43 ಇತರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಪತ್ತೆಯಾಯಿತು. ಸಂಬಂಧಿಸಿದ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಒಟ್ಟು 30,800ರೂ. ದಂಡವನ್ನು ವಿಧಿಸಿ ವಸೂಲಿ ಮಾಡಲಾಗಿದೆ.
ಅಲ್ಲದೆ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಿಗೆ ಪೊಲೀಸರು ಭೇಟಿ ನೀಡಿ ಒಟ್ಟು 295 ಬಸ್‌ಗಳು, 69 ಮಿನಿ ಬಸ್‌ಗಳು ಹಾಗೂ 34 ಕಾರು ಸೇರಿದಂತೆ ಇತರ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ವಾಹನಗಳ ದಾಖಲೆಗಳು, ಸುರಕ್ಷತಾ ಉಪಕರಣಗಳು ಹಾಗೂ ಸರಕಾರದ ಮಾರ್ಗಸೂಚಿಗಳ ಅನುಸರಣೆಯನ್ನು ಪರಿಶೀಲಿಸಲಾಯಿತು.
ತಪಾಸಣೆ ಸಂದರ್ಭದಲ್ಲಿ ಶಾಲಾ ವಾಹನಗಳ ಚಾಲಕರು ಹಾಗೂ ನಿರ್ವಹಕರಿಗೆ ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಸರಕಾರದ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಯಿತು. ಅಲ್ಲದೆ ರಸ್ತೆ ಸುರಕ್ಷತೆ, ಮಕ್ಕಳ ಸುರಕ್ಷಿತ ಸಾರಿಗೆ, ಸಂಚಾರ ನಿಯಮಗಳು ಹಾಗೂ ಸಂಬಂಧಿತ ಕಾನೂನುಗಳ ಕುರಿತು ಅರಿವು ಮೂಡಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು.
‘ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಶಾಲಾ ಮಕ್ಕಳ ಸುರಕ್ಷಿತ ಸಂಚಾರಕ್ಕೆ ಆದ್ಯತೆ ನೀಡುತ್ತಿದ್ದು, ಮುಂದಕ್ಕೂ ಇಂತಹ ಕಾರ್ಯಾಚರಣೆ ನಿರಂತರವಾಗಿ ನಡೆಸಲಾಗುತ್ತದೆ. ಶಾಲಾ ಆಡಳಿತ ಮಂಡಳಿಗಳು, ವಾಹನ ಮಾಲಕರು, ಚಾಲಕರು ಹಾಗೂ ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು’
-ಹರಿರಾಂ ಶಂಕರ್, ಎಸ್ಪಿ ಉಡುಪಿ






