ಮೇ 5ರಿಂದ ಪರಿಶಿಷ್ಟ ಜಾತಿ ಒಳಮೀಸಲಾತಿಗಾಗಿ ಸಮೀಕ್ಷೆ: ಉಡುಪಿ ಡಿಸಿ ವಿದ್ಯಾಕುಮಾರಿ

ಉಡುಪಿ, ಎ.24: ಪರಿಶಿಷ್ಟ ಜಾತಿ ಒಳಮೀಸಲಾತಿಗಾಗಿ ಸಮೀಕ್ಷೆ ನಡೆಸುವ ಬಗ್ಗೆ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ಸಮೀಕ್ಷೆ ನಡೆಸಲು ಈಗಾಗಲೇ ರಚಿಸಿರುವ ಉಡುಪಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಮೇ 5ರಿಂದ ಮೂರು ಹಂತಗಳಲ್ಲಿ ಸಮೀಕ್ಷೆಯನ್ನು ಪ್ರಾರಂಭಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತಂತೆ ನ್ಯಾಯಮೂರ್ತಿ ಹೆಚ್.ಎನ್, ನಾಗಮೋಹನದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ದತ್ತಾಂಶಗಳನ್ನು ಸಮೀಕ್ಷೆ ನಡೆಸುವ ಸಂಬಂಧ ನಡೆದ ಬುಧವಾರ ಸಂಜೆ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸಮಿತಿಯು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷಾ ಕಾರ್ಯವನ್ನು ಸಮರ್ಪಕವಾಗಿ ಹಾಗೂ ಯಶಸ್ವಿಯಾಗಿ ನಡೆಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು.
ಜಿಲ್ಲೆಯಲ್ಲಿ ಮೇ 5ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ದತ್ತಾಂಶಗಳನ್ನು ಸಂಗ್ರಹಿಸಿ ಸಮೀಕ್ಷೆ ನಡೆಸುವ ಕಾರ್ಯ ಶಾಲಾ ಶಿಕ್ಷಕರಿಂದ ನಡೆಯಲಿದೆ. ದತ್ತಾಂಶ ಸಂಗ್ರಹಣೆಗಾಗಿ ಮೇ 5ರಿಂದ 17ರವರೆಗೆ ಮನೆ ಮನೆಗೆ ಆಗಮಿಸುವ ಗಣತಿದಾರ ಶಿಕ್ಷಕರೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿದರು.
ತಾಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತಾಲೂಕು ಮಟ್ಟದ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ತಾಲೂಕಿನ ತಹಶೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಇತರ ಅಧಿಕಾರಿಗಳು ಇದರ ಸದಸ್ಯರಾಗಿರುತ್ತಾರೆ ಎಂದರು.
ಸಮೀಕ್ಷೆಯ ಮೇಲ್ವಿಚಾರಣೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಶಿಕ್ಷಕರನ್ನು ನಿಯೋಜಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ಕ್ರಮಕೈಗೊಳ್ಳುವಂತೆ ತಿಳಿಸಿದರು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ನೋಡಲ್ ಅಧಿಕಾರಿಗಳು ಸಮೀಕ್ಷೆಯ ಸಂಪೂರ್ಣ ಮೇಲುಸ್ತುವಾರಿ ವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಕುಟುಂಬ ದತ್ತಾಂಶದ ಪ್ರಕಾರ ಗ್ರಾಮ ಹಾಗೂ ನಗರಗಳಲ್ಲಿ ಕುಟುಂಬವಾರು ಸಂಖ್ಯೆಗಳನ್ನು ವಿಭಜಿಸಿ, ತಾಲೂಕುಗಳಿಗೆ ಗ್ರಾಮ ಪಂಚಾಯತ್‌ವಾರು/ಗ್ರಾಮವಾರು/ವಾರ್ಡ್‌ವಾರು ಪಾಸ್‌ವರ್ಡ್ ಮೂಲಕ ಮಾಹಿತಿ ಒದಗಿಸಲಾಗುವುದು. ಶಿಕ್ಷಕರನ್ನು ಸಮೀಕ್ಷಾ ಕಾರ್ಯಕ್ಕೆ ಬಳಸಿಕೊಳ್ಳಲು ತಿಳಿಸಲಾಯಿತು.
ಎಸ್‌ಸಿ ಜನಸಂಖ್ಯೆ 75,000: ಉಡುಪಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಸುಮಾರು 75,000ಕ್ಕೂ ಅಧಿಕ ಜನಸಂಖ್ಯೆ ಇದ್ದು, ಇವರ ಸಮೀಕ್ಷೆ ನಡೆಸಲು ಸುಮಾರು 1000ರಿಂದ 1100 ಗಣತಿದಾರರ ಅವಶ್ಯಕತೆ ಇದೆ.ಈ ಕಾರ್ಯಕ್ಕೆ ಶಿಕ್ಷಣ ಇಲಾಖೆ ಶಿಕ್ಷಕರನ್ನು ನೇಮಕಮಾಡಬೇಕು ಎಂದ ಅವರು, ಜಿಲ್ಲಾ ಮಾಸ್ಟರ್ ಟ್ರೈನರ್‌ಗಳಿಗೆ ಎಪ್ರಿಲ್ 28ರಂದು ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ತರಬೇತಿ ನೀಡಲಾಗು ವುದು. ತರಬೇತಿಯಲ್ಲಿ ಎಲ್ಲಾ ಶಿಕ್ಷಕರು ತಪ್ಪದೇ ಭಾಗವಹಿಸಬೇಕು ಎಂದರು.
ಸರಕಾರದಿಂದ ಕಾಲಕಾಲಕ್ಕೆ ನೀಡುವ ಎಲ್ಲಾ ನಿರ್ದೇಶನ ಹಾಗೂ ಮಾರ್ಗಸೂಚಿಗಳಂತೆ ಎಲ್ಲಾ ಇಲಾಖೆ ಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಿ ಸಮೀಕ್ಷೆ ಕಾರ್ಯ ಯಶಸ್ವಿಗೊಳ್ಳುವಂತೆ ನೋಡಿಕೊಳ್ಳಬೇಕು ಎಂದೂ ಡಾ.ವಿದ್ಯಾಕುಮಾರಿ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶ್ರೀನಿವಾಸ್ ರಾವ್, ಸಹಾಯಕ ಕಮಿಷನರ್ ರಶ್ಮಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ, ಡಯಟ್ ಉಪ ಪ್ರಾಂಶುಪಾಲ ಡಾ. ಅಶೋಕ್ ಕಾಮತ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







