ಉಡುಪಿ ಜಿಲ್ಲೆಯ 5 ಸಂಸ್ಥೆಗಳಲ್ಲಿ ಕಿಶೋರ ಕಾರ್ಮಿಕರು ಪತ್ತೆ: ಪ್ರಕರಣ ದಾಖಲು
ಬಾಲ ಕಾರ್ಮಿಕ ಕಾರ್ಯಪಡೆ ಸಮಿತಿ ಸಭೆ

ಉಡುಪಿ, ಜೂ.5: ಕಾರ್ಮಿಕ ಇಲಾಖೆ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಒಟ್ಟು 1032 ತಪಾಸಣೆ ಗಳನ್ನು ನಡೆಸಿದಾಗ, 2 ಅಪಾಯಕಾರಿ ಹಾಗೂ 3 ಅಪಾಯಕಾರಿಯಲ್ಲದ ಸಂಸ್ಥೆಗಳಲ್ಲಿ ಕಿಶೋರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದ್ದು, ಒಟ್ಟು 5 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಗುರುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬಾಲಕಾರ್ಮಿಕ ಯೋಜನಾ ಸಂಘದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ, ಸಲಹಾ ಸಮಿತಿ ಮತ್ತು ಟಾಸ್ಕ್‌ಫೋರ್ಸ್ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಬಾಲಕಾರ್ಮಿಕ ಪದ್ಧತಿ ಸಮಾಜದಲ್ಲಿ ಅನಿಷ್ಠ ಪಿಡುಗಾಗಿದೆ. ಜಿಲ್ಲೆಯಲ್ಲಿ ಇದನ್ನು ಸಂಪೂರ್ಣವಾಗಿ ನಿರ್ಮೂ ಲನೆ ಮಾಡುವುದರೊಂದಿಗೆ ಮಕ್ಕಳಿಗೆ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿಸಲು ಆದ್ಯತೆ ನೀಡಬೇಕು ಎಂದು ಡಾ.ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಮಕ್ಕಳು ತಮ್ಮ ಬಾಲ್ಯಾವಸ್ಥೆಯಲ್ಲಿಯೇ ದುಡಿಮೆಗೆ ತೊಡಗಿಕೊಂಡಲ್ಲಿ ಅವರು ಶಿಕ್ಷಣದಿಂದ ವಂಚಿತರಾಗು ವುದರ ಜೊತೆಗೆ ಅವರ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಹಾನಿ ಉಂಟಾಗುತ್ತದೆ. ಜೊತೆಗೆ ಅವರಿಗೆ ಭವಿಷ್ಯದ ಆಯ್ಕೆಗಳನ್ನು ಸೀಮಿತಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ಬಾಲಕಾರ್ಮಿಕ ರಕ್ಷಣಾ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕರ್ತವ್ಯ ಜನ ಸಾಮಾನ್ಯರು ಹಾಗೂ ಅಧಿಕಾರಿಗಳ ಮೇಲಿದೆ. ಇದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ಮಕ್ಕಳು ತಮ್ಮ ಬಾಲ್ಯಾವಸ್ಥೆಯನ್ನು ಸವಿಯುವುದರೊಂದಿಗೆ ಶಿಕ್ಷಣವಂತರಾಗಲು ಪೂರಕ ವಾತಾವರಣ ನಿರ್ಮಿಸಬೇಕು ಎಂದರು.
ಮಲ್ಪೆ ಮೀನುಗಾರಿಕಾ ಬಂದರಿನ ಹರಾಜು ಸ್ಥಳಗಳಲ್ಲಿ, ಕೆಲವು ವಾಣಿಜ್ಯ ಸ್ಥಳಗಳಲ್ಲಿ, ಕಲ್ಲುಕೋರೆಗಳಲ್ಲಿ, ಮರಳು ತೆಗೆಯುವ ಪ್ರದೇಶಗಳು ಸೇರಿದಂತೆ ವಿವಿದೆಡೆಗಳಲ್ಲಿ ಮಕ್ಕಳು ದುಡಿಮೆಗೆ ತೊಡಗಿಕೊಳ್ಳು ತ್ತಿರುವ ಬಗ್ಗೆ ಈ ಹಿಂದೆ ಅನೇಕ ಪ್ರಕರಣಗಳು ವರದಿಯಾಗಿವೆ. ಅಲ್ಲಿ ಇಂಥ ಪ್ರಕರಣಗಳು ಪುನರಾವರ್ತಿತಗೊಳ್ಳುವ ಸಾಧ್ಯತೆಗಳು ಇರುತ್ತವೆ. ಇಂತಹ ತಾಣಗಳ ಮೇಲೆ ನಿರಂತರವಾಗಿ ಆಗಿಂದಾಗ್ಗೆ ಹಠಾತ್ ದಾಳಿ ನಡೆಸಿ, ಮಕ್ಕಳು ನಿಯೋಜನೆ ಗೊಂಡಿರುವುದು ಕಂಡುಬಂದಲ್ಲಿ ಕಾನೂನಿನಡಿ ಪ್ರಕರಣ ದಾಖಲಿಸಿ, ಅವರುಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಕೆಲವು ವರ್ಷಗಳ ಹಿಂದೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರಾಗಿ ಕಂಡುಬಂದ ಮಕ್ಕಳಿಗೆ ಬಾಲ ಕಾರ್ಮಿಕ ಪುನರ್ವಸತಿ ನಿಧಿ ಹಾಗೂ ಕಾರ್ಪಸ್ ನಿಧಿ ಒಳಗೊಂಡ ಒಟ್ಟು 35000 ರೂ.ಗಳನ್ನು ಅವರ ವಿದ್ಯಾಭ್ಯಾಸಕ್ಕಾಗಿ 18 ವರ್ಷ ತುಂಬಿದ ಮೂರು ತಿಂಗಳ ಒಳಗೆ ಕಾಯ್ದೆಯನ್ವಯ ನೀಡಬೇಕು. ಆದರೆ ಅನೇಕ ಪ್ರಕರಣಗಳಲ್ಲಿ ಇದನ್ನು ನೀಡದೇ ಇರುವುದು ಕಂಡು ಬಂದಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಕೂಡಲೇ ಮಕ್ಕಳಿಗೆ ಅನುದಾನ ನೀಡಬೇಕು ಎಂದು ಸೂಚನೆ ನೀಡಿದರು.
ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ನೇಮಿಸಿಕೊಂಡ ಸಂಸ್ಥೆಯ ವಿರುದ್ಧ ಹಾಕಿರುವ ಮೊಕದ್ದಮೆ ಗಳನ್ನು ನಿರಂತರವಾಗಿ ಅನುಕರಣೆ ಮಾಡುವ ಜೊತೆಗೆ ತಪ್ಪಿತಸ್ಥರಿಗೆ ದಂಡ ಹಾಗೂ ಶಿಕ್ಷೆ ವಿಧಿಸುವಂತೆ ನೋಡಿಕೊಳ್ಳಬೇಕು ಎಂದ ಅವರು, ಪುನರಾವರ್ತಿತವಾಗಿ ಬಾಲ ಕಾರ್ಮಿಕರನ್ನು ನಿಯೋಜಿಸಿಕೊಂಡ ಸಂಸ್ಥೆ ಅಥವಾ ವಾಣಿಜ್ಯ ಉದ್ಯಮಗಳಿದ್ದಲ್ಲಿ ಅಂತಹ ಸಂಸ್ಥೆಯ ಪರವಾನಿಗೆಯನ್ನು ರದ್ದುಪಡಿಸಲು ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳುವಂತೆ ವೃತ್ತ ನಿರೀಕ್ಷಕರು ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಿಸಿದ ಮಕ್ಕಳ ಮುಂದಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಜವಾಬ್ದಾರಿಯನ್ನು ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಸಮನ್ವಯದೊಂದಿಗೆ ಮಾಡಬೇಕು. ಅವಶ್ಯವಿದ್ದಲ್ಲಿ ಮಕ್ಕಳ ಶಿಕ್ಷಣ ಮುಂದುವರೆಸಲು ವಸತಿ ಶಾಲೆ, ಹಾಸ್ಟಲ್ ಗಳಂತಹ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ್ ಕಾಮತ್, ಬಾಲ ಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕಿ ಅಮೃತಾ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಭಿಕ್ಷಾಟನೆ ತಡೆಯಲು ಸಮಸ್ಯೆ
ಜಿಲ್ಲೆಯಲ್ಲಿ ಭಿಕ್ಷಾಟನೆಯನ್ನು ಸಣ್ಣ ಮಗುನೊಂದಿಗೆ ತಾಯಂದಿರು ಮಾಡುತ್ತಿರುವ ಪ್ರಕರಣಗಳು ಕಂಡು ಬಂದಿವೆ. ಇಂಥವರನ್ನು ಹಿಡಿದು ನಿರಾಶ್ರಿತರ ಕೇಂದ್ರಗಳಲ್ಲಿ ಪುನರ್ವಸತಿ ಕಲ್ಪಿಸಲು ನೆರೆಯ ದಕ್ಷಿಣ ಕನ್ನಡ ಜಿಲ್ಲೆಗೆ ಕಳುಹಿಸಿಕೊಟ್ಟಾಗ ಸಣ್ಣ ಮಕ್ಕಳನ್ನು ನಿರಾಶ್ರಿತ ಕೇಂದ್ರದಲ್ಲಿ ನಿಯೋಜಿಸಲು ಅವಕಾಶವಿಲ್ಲ ಎಂಬ ಕಾರಣ ಹೇಳುತ್ತಾರೆ. ಇದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲೇ ನಿರಾಶ್ರಿತರ ಕೇಂದ್ರ ತೆರೆಯಲು ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಬೇಕೆಂದು ಡಾ.ವಿದ್ಯಾಕುಮಾರಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.







