ಬಿಸಿಲಿನ ಮಧ್ಯೆ ಮಳೆ: ಉಡುಪಿ ಜಿಲ್ಲೆಯಲ್ಲಿ ಆರು ಮನೆಗೆ ಹಾನಿ; 5 ಲಕ್ಷ ರೂ. ನಷ್ಟ

ಉಡುಪಿ: ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್‌ನ ಹೊರತಾಗಿಯೂ ಉಡುಪಿ ಜಿಲ್ಲೆಯಲ್ಲಿ ಸೂರ್ಯ ದರ್ಶನದ ಮಧ್ಯೆ ಆಗಾಗ ಮಳೆ ಸುರಿಯುತಿದ್ದು, ಒಟ್ಟಾರೆಯಾಗಿ ಮಳೆಯ ಪ್ರಮಾಣ ಕಡಿಮೆಯಾಗಿದೆ.
ಜಿಲ್ಲೆಯ ವಿವಿಧ ಕಡೆಗಳಿಂದ ಇಂದು ಆರು ಮನೆ ಹಾನಿ ಪ್ರಕರಣಗಳು ವರದಿಯಾಗಿದ್ದು, ಸುಮಾರು ಐದು ಲಕ್ಷ ರೂ.ಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ. ಜಿಲ್ಲೆಯಲ್ಲಿ ಸರಾಸರಿ 31.5ಮಿ.ಮೀ ಮಳೆಯಾ ಗಿದ್ದು, ಹೆಬ್ರಿ ಯಲ್ಲಿ ಅತ್ಯಧಿಕ 48.0ಮಿ.ಮೀ. ಮಳೆ ಬಿದ್ದಿದೆ. ಕಾರ್ಕಳದಲ್ಲಿ 40.8, ಬೈಂದೂರಿನಲ್ಲಿ 30.7, ಕುಂದಾಪುರದಲ್ಲಿ 29.3ಮಿ.ಮೀ.ನಷ್ಟು ಮಳೆಯಾಗಿದೆ.
ಕುಂದಾಪುರ ತಾಲೂಕಿನಲ್ಲೇ ಹೆಚ್ಚಿನ ಮನೆ ಹಾನಿ ಪ್ರಕರಣ ವರದಿ ಯಾಗಿದ್ದು, ದೇವಲ್ಕುಂದ ಗ್ರಾಮದಲ್ಲಿ ಕುಷ್ಠ ಪೂಜಾರಿ ಎಂಬವರ ವಾಸ್ತವ್ಯದ ಪಕ್ಕಾ ಮನೆ ಗಾಳಿ-ಮಳೆಗೆ ಸಂಪೂರ್ಣ ಧರಾಶಾಹಿಯಾಗಿದ್ದು, ರಡೂವರೆ ಲಕ್ಷದಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಅದೇ ರೀತಿ ಗುಜ್ಜಾಡಿ ಗ್ರಾಮದ ಮುತ್ತು ಎಂಬವರ ಪಕ್ಕಾ ಮನೆಯೂ ಮಳೆಯಿಂದ ಸಂಪೂರ್ಣ ಹಾನಿಗೊ ಳಗಾಗಿದ್ದು ಒಂದೂವರೆ ಲಕ್ಷದಷ್ಟು ನಷ್ಟದ ಅಂದಾಜು ಮಾಡಲಾಗಿದೆ. ನೂಜಾಡಿ ಗ್ರಾಮದ ಅಜ್ಜರಬೆಟ್ಟು ನಾಗರತ್ನ ಮೊಗೇರ್ತಿ ಅವರ ಮನೆ ಮೇಲೆ ಅಡಿಕೆ ಮರ ಬಿದ್ದು 20,000ರೂ. ನಷ್ಟ ಸಂಭವಿಸಿದೆ.
ಮೊಳಹಳ್ಳಿ ಗ್ರಾಮದ ವನಜ ಶೆಡ್ತಿ ಎಂಬವರ ಮನೆಯ ಜಾನುವಾರು ಕೊಟ್ಟಿಗೆ ಮೇಲೆ ಮರ ಬಿದ್ದು 20,000ರೂ., ವಡೇರಹೋಬಳಿಯ ನಾರಾಯಣ ತೋಡಕಟ್ಟ್ ಎಂಬವರ ಮನೆಯ ಗೋಡೆ ಮಳೆಗೆ ಕುಸಿದಿದ್ದು 30,000ರೂ. ನಷ್ಟವಾಗಿರುವುದಾಗಿ ತಿಳಿದುಬಂದಿದೆ.
ಕಾಪು ತಾಲೂಕಿನ ಕಟ್ಟಿಂಗೇರಿಯ ಅನಿತಾ ಮಥಿಯಾಸ್ ಎಂಬವರ ವಾಸದ ಮನೆಯ ಒಂದು ಭಾಗ ಮಳೆಗೆ ಭಾಗಶ: ಹಾನಿಗೊಳಗಾಗಿದೆ. ಇದರಿಂದ 25,000ರೂ. ನಷ್ಟವಾಗಿದ್ದರೆ, ಹೆಬ್ರಿ ತಾಲೂಕು ಕಬ್ಬಿನಾಲೆಯ ವಾಸು ಪೂಜಾರಿ ಎಂಬವರ ಮನೆಯೂ ಭಾಗಶ: ಹಾನಿಗೊಂಡಿದ್ದು 20ಸಾವಿರ ನಷ್ಟವಾ ಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಗೆ ಬಂದಿರುವ ಮಾಹಿತಿ ತಿಳಿಸಿದೆ.







