ಬಿಜೆಪಿ ಏನೇ ತಿಪ್ಪರಲಾಗ ಹಾಕಿದರೂ 5 ವರ್ಷ ರಾಜ್ಯದ ಜನತೆಗೆ ‘ಗ್ಯಾರಂಟಿ’: ಕಾರ್ಕಳ ಗ್ಯಾರಂಟಿ ಸಮಾವೇಶದಲ್ಲಿ ಸಚಿವೆ ಹೆಬ್ಬಾಳ್ಕರ್

ಕಾರ್ಕಳ, ಸೆ.12:ವಿಪಕ್ಷ ಬಿಜೆಪಿ ಎಷ್ಟೇ ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್ ಸರಕಾರ ಐದು ವರ್ಷಗಳ ಕಾಲ ರಾಜ್ಯದ ಜನತೆಗೆ ‘ಪಂಚ ಗ್ಯಾರಂಟಿ’ಯನ್ನು ನೀಡೇ ನೀಡುತ್ತದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೃಢವಾಗಿ ನುಡಿದಿದ್ದಾರೆ.
ಕಾರ್ಕಳದ ಮಂಜುನಾಥ್ ಪೈ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಕಾರ್ಕಳ ತಾಲೂಕು ಗ್ಯಾರಂಟಿ ಅನು ಷ್ಠಾನ ಸಮಿತಿ ಹಾಗೂ ತಾಲೂಕು ಪಂಚಾಯತ್, ಕಾರ್ಕಳ ಪುರಸಭೆ ಹಾಗೂ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ಯಾರಂಟಿ ಸಮಾವೇಶ ಹಾಗೂ ಗ್ಯಾರಂಟಿ ಅದಾಲತ್ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಬೇಕಾಬಿಟ್ಟಿಯಾಗಿ ಟೀಕಿಸುತ್ತಿದ್ದ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ಇಂದು ಬೇರೆ ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿವೆ ಎಂದು ಟೀಕಿಸಿದ ಹೆಬ್ಬಾಳ್ಕರ್, ಕರ್ನಾಟಕದ ಗ್ಯಾರಂಟಿ ಮಾಡೆಲ್‌ಗಳನ್ನು ಬಿಜೆಪಿ ಸರಕಾರದ ರಾಜ್ಯಗಳಲ್ಲೂ ಹೆಸರು ಬದಲಿಸಿ ಅನುಷ್ಠಾನ ಗೊಳಿಸಲಾಗಿದೆ ಎಂದರು.
ಕರ್ನಾಟಕದ 1.24 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಹಣ ಸಂದಾಯ ಆಗುತ್ತಿದೆ. ಆದರೆ, ಜಿಎಸ್ಟಿ, ಆದಾಯ ತೆರಿಗೆಯ ತಾಂತ್ರಿಕ ಸಮಸ್ಯೆಯಿಂದಾಗಿ ರಾಜ್ಯದ ಸುಮಾರು ಎರಡು ಲಕ್ಷ ಮಹಿಳೆಯರಿಗೆ ಯೋಜನೆ ಲಾಭ ಸಿಗುತ್ತಿಲ್ಲ. ಆದರೆ ಇತ್ತೀಚೆಗೆ ಈ ಪೈಕಿ 50 ಸಾವಿರ ಮಹಿಳೆಯರ ಜಿಎಸ್‌ಟಿ ಜಿಎಸ್ಟಿ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಮುಂದಿನ ತಿಂಗಳಿನಿಂದ ಅವರ ಖಾತೆಗಳಿಗೆ 2000ರೂ. ಜಮಾವಾಗಲಿದೆ. ಉಳಿದ ಒಂದೂವರೆ ಲಕ್ಷ ಮಹಿಳೆಯರ ಸಮಸ್ಯೆಯನ್ನು ಶೀಘ್ರವೇ ಬಗೆ ಹರಿಸಿ ಖಾತೆಗೆ ಹಣ ಸಂದಾಯವಾಗುವಂತೆ ಮಾಡಲಾಗುವುದು ಎಂದವರು ಭರವಸೆ ನೀಡಿದರು.
ಕಾಂಗ್ರೆಸ್ ಸರಕಾರ ಯಾವತ್ತೂ ಬಡವರ, ಮಹಿಳೆಯರ, ದೀನ ದಲಿತರ ಬಗ್ಗೆಯೇ ಯೋಚಿಸುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ ಗಳಾಗಿದ್ದು, ಇಡೀ ವಿಶ್ವವೇ ಭಾರತದ ಕಡೆ ತಿರುಗುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷದ ಯೋಜನೆಗಳು. ಕಾಂಗ್ರೆಸ್ ಪಕ್ಷದ ಇತಿಹಾಸ ಇಡೀ ದೇಶದ ಇತಿಹಾಸ. ಸಾಲಮೇಳ ಮಾಡಿದ ಜನಾದರ್ನ ಪೂಜಾರಿ ಜನರ ಮನೆ ಬಾಗಿಲಿಗೆ ಬ್ಯಾಂಕ್ ಕೊಂಡ್ಯೊಯ್ದರು. ಉಳುವವನೇ ಭೂಮಿ ಒಡೆಯ ಎಂಬ ದಿಟ್ಟ ಕಾಯ್ದೆಯನ್ನು ಇಂದಿರಾಗಾಂಧಿ ಜಾರಿಗೆ ತಂದರು ಎಂದು ಸಚಿವರು ತಮ್ಮ ಸರಕಾರದ ಸಾಧನೆಗಳನ್ನು ವಿವರಿಸಿದರು.
ದೇಶದೆಲ್ಲೆಡೆ ಅಂಗನವಾಡಿ ಕೇಂದ್ರಗಳನ್ನು ತೆರೆಯುವ ಮೂಲಕ ಬಡವರ ಮಕ್ಕಳಿಗೆ ಪ್ಟೌಷಿಕ ಆಹಾರ, ಬಡವರ ಮಕ್ಕಳನ್ನು ಆರೈಕೆ ಮಾಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದ್ದು ಇಂದಿರಾಗಾಂಧಿ, ಮುಂದಿನ ತಿಂಗಳಿಗೆ ಸುವರ್ಣ ವರ್ಷ ಪೂರೈಸುತ್ತಿದ್ದು, ನವೆಂಬರ್ ತಿಂಗಳಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾ ಗುತ್ತಿದೆ ಎಂದರು.
ನೋಟ್ ಬ್ಯಾನ್, ಕರೋನಾ ಮಹಾಮಾರಿಯಿಂದ ಜನತೆ ತತ್ತರಿಸಿದ್ದಾಗ ರೈತರು, ಬಡಜನರ ಒಳಿತಿಗಾಗಿ ನಮ್ಮ ಸರಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಮಹಿಳೆಯರ ಕುರಿತಂತೆ ಚಿಂತಿಸಿ ಪಂಚ ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಇದು ನಮ್ಮ ಸರಕಾರದ ಸಾಧನೆ ಎಂದು ಸಚಿವರು ಹೆಮ್ಮೆಯಿಂದ ಹೇಳಿಕೊಂಡರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ಮಾತನಾಡಿ, ತಾಲೂಕಿನಲ್ಲಿ 36,495 ಗೃಹ ಜ್ಯೋತಿ, 36,676 ಗೃಹಲಕ್ಷ್ಮಿ, 31,064 ಅನ್ನ ಭಾಗ್ಯ ಹಾಗೂ 532 ಯುವನಿಧಿ ಫಲಾನುಭವಿ ಗಳಿದ್ದು, ಒಟ್ಟು 222 ಕೋಟಿ 75 ಲಕ್ಷ 35 ಸಾವಿರ ರೂ.ಹಣ ಈವರೆಗೆ ಸಂದಾಯವಾಗಿದೆ ಎಂದರು.
ಗೃಹ ಲಕ್ಷ್ಮಿ ಯೋಜನೆಯ 21 ಕಂತುಗಳಲ್ಲಿ ಒಟ್ಟು 42,000 ರೂ ಮಹಿಳೆಯರ ಖಾತೆಗೆ ಸಂದಾಯವಾಗಿದ್ದು ಇದರಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗುತಿದ್ದಾರೆ. ಈ ಹಣದಿಂದ ಮಹಿಳೆಯರ ಮನೆ ನಿರ್ವಹಣೆ ಸಾಧ್ಯವಾಗಿದೆ. ಯೋಜನೆಯಲ್ಲಿ ಕೆಲವು ತಾಂತ್ರಿಕ ತೊಂದರೆಗಳು ಕಂಡುಬಂದಿದ್ದು, ಪ್ರತೀ ಗ್ರಾಮ ಮಟ್ಟದಲ್ಲಿ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.
ಸಮಾರಂಭದಲ್ಲಿ ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಉದಯ್ ಶೆಟ್ಟಿ ಮುನಿಯಾಲು, ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೀಶ ದೇವಾಡಿಗ, ಕುಕ್ಕುಂದೂರು ಗ್ರಾಪಂ ಅಧ್ಯಕ್ಷೆ ಉಷಾ, ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ, ಕಾರ್ಕಳ ಇಒ ಪ್ರಶಾಂತ್ ರಾವ್, ಲೀನ ಬ್ರಿಟ್ಟೋ, ಪ್ರದೀಪ್ ಉಪಸ್ಥಿತರಿದ್ದರು.
ಕಾರ್ಕಳ ತಹಶೀಲ್ದಾರರಾದ ಪ್ರದೀಪ್ ಆರ್. ಸ್ವಾಗತಿಸಿದರೆ, ಅಜಿತ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.







