ವಂಡ್ಸೆ ಸೇರಿ ಉಡುಪಿ ಜಿಲ್ಲೆಯ 5 ಗ್ರಾಪಂಗಳಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಕುಂದಾಪುರ: ಕೇಂದ್ರ ಸರಕಾರದ ದಿನ್‌ದಯಾಳ್ ಉಪಾಧ್ಯಾಯ ರಾಜ್ಯ ವಿಕಾಸ ಪುರಸ್ಕಾರಕ್ಕೆ ಆಯ್ಕೆಯಾದ ರಾಜ್ಯದ 6 ಗ್ರಾಪಂಗಳ ಪೈಕಿ ಉಡುಪಿ ಜಿಲ್ಲೆಯೊಂದರಲ್ಲೇ5 ಗ್ರಾಪಂಗಳು ಪುರಸ್ಕೃತಗೊಂಡಿವೆ. ಕುಂದಾಪುರ ತಾಲೂಕಿನ ವಂಡ್ಸೆ, ಹಕ್ಲಾಡಿ, ಹೆಬ್ರಿ ತಾಲೂಕಿನ ಮುದ್ರಾಡಿ, ಮಡಾಮಕ್ಕಿ, ಕಾರ್ಕಳದ ಸಾಣೂರು ಗ್ರಾಪಂ ಉಡುಪಿ ಜಿಲ್ಲೆಯಿಂದ ಆಯ್ಕೆಯಾಗಿದ್ದರೆ ಬೆಂಗಳೂರಿನ ಹಳನಾಯಕಹಳ್ಳಿ ಗ್ರಾಪಂ ಈ ಪುರಸ್ಕಾರಕ್ಕೆ ಆಯ್ಕೆಯಾದ ಆರನೇ ಗ್ರಾಪಂ.
ಕೇಂದ್ರದ ಪಂಚಾಯತ್‌ರಾಜ್ ಇಲಾಖೆಯ ವತಿಯಿಂದ ಬುಧವಾರ ಹೊಸದಿಲ್ಲಿಯಲ್ಲಿ ಆಯೋಜಿತವಾದ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಂಚಾಯತ್‌ರಾಜ್ ಸಚಿವ ರಾಜೀವ್ ರಂಜನ್ ಸಿಂಗ್, ಸಚಿವರು ಹಾಗೂ ಅಧಿಕಾರಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರೂ ಭಾಗವಹಿಸಿದ್ದರು.
ದೇಶಾದ್ಯಂತ ಒಟ್ಟು 28 ಗ್ರಾಮಪಂಚಾಯತ್‌ಗಳು ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದವು. ಇವುಗಳಲ್ಲಿ ಕರ್ನಾಟಕ ದಿಂದ ಆರು ಗ್ರಾಪಂಗಳು ಪ್ರಶಸ್ತಿ ಪಟ್ಟಿಯಲ್ಲಿದ್ದು, ಇವುಗಳಲ್ಲಿ ಐದು ಉಡುಪಿ ಜಿಲ್ಲೆಗೆ ಸೇರಿರುವುದು ವಿಶೇಷ. ಇವುಗಳ ವಿವರ:
ಮುದ್ರಾಡಿ ಗ್ರಾಪಂ: ಬಡತನ ಮುಕ್ತ ಮತ್ತು ಸುಧಾರಿತ ಜೀವನೋಪಾಯ ಪಂಚಾಯತ್ ಪುರಸ್ಕಾರಕ್ಕೆ ಮುದ್ರಾಡಿ ಗ್ರಾಪಂ ಆಯ್ಕೆಯಾಗಿದ್ದು, 1 ಕೋಟಿ ರೂ. ನಗದು ಪುರಸ್ಕಾರ ದೊರಕಿದೆ. ಗ್ರಾಪಂ ಪಿಡಿಒ ಸುಭಾಶ್ ಖಾರ್ವಿ, ಹಿಂದಿನ ಪಿಡಿಒ ಸದಾಶಿವ ಶೇರೆಗಾರ್, ಉಡುಪಿ ತಾಪಂ ಇಒ ವಿಜಯಾ, ಬೆಳ್ವೆ ಗ್ರಾಪಂ ಕಾರ್ಯದರ್ಶಿ ಅಮೃತಾ ಕುಲಾಲ್ ಪ್ರಶಸ್ತಿ ಸ್ವೀಕರಿಸಿದರು.
ಮಡಾಮಕ್ಕಿ ಗ್ರಾಪಂ: ಕುಡಿಯುವ ನೀರಿನ ಸುಸ್ಥಿರ ಯೋಜನೆಯ ಪುರಸ್ಕಾರಕ್ಕೆ ಮಡಾಮಕ್ಕಿ ಗ್ರಾ.ಪಂ. ಆಯ್ಕೆಯಾ ಗಿದ್ದು, 75 ಲಕ್ಷ ರೂ. ನಗದು ಪುರಸ್ಕಾರ ಪಡೆದಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಹೆಬ್ರಿ ತಾಪಂ. ಇಒ ಪ್ರಶಾಂತ್ ರಾವ್, ಗ್ರಾಪಂ ಪಿಡಿಒ ರಿತೇಶ್ ಪುತ್ರನ್ ಪ್ರಶಸ್ತಿ ಸ್ವೀಕರಿಸಿದರು.
ವಂಡ್ಸೆ ಗ್ರಾಪಂ: ಆರೋಗ್ಯ ಸೇವೆಯ ಪುರಸ್ಕಾರಕ್ಕೆ ವಂಡ್ಸೆ ಗ್ರಾ.ಪಂ. ಆಯ್ಕೆ ಮಾಡಲಾಗಿದ್ದು, 75 ಲಕ್ಷ ರೂ. ನಗದು ಪುರಸ್ಕಾರ ಪಡೆದಿದೆ. ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಗ್ರಾಪಂ ಪಿಡಿಒ ಪೂರ್ಣಿಮಾ, ಆಲೂರು ಪಿಡಿಒ ರೂಪಾ ಗೋಪಿ ಪ್ರಶಸ್ತಿ ಸ್ವೀಕರಿಸಿದರು.
ಹಕ್ಲಾಡಿ ಗ್ರಾಪಂ: ಸಾಮಾಜಿಕ ನ್ಯಾಯ ಹಾಗೂ ಸಾಮಾಜಿಕ ಭದ್ರತೆಯುಳ್ಳ ಪಂಚಾಯತ್ ಅನ್ನುವ ಪುರಸ್ಕಾರಕ್ಕೆ ಹಕ್ಲಾಡಿ ಗ್ರಾಪಂ ಆಯ್ಕೆಯಾಗಿದ್ದು, 25 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ. ಕುಂದಾಪುರ ತಾಲೂಕು ಯೋಜನಾ ಧಿಕಾರಿ ಸತೀಶ್ ವಡ್ಡರ್ಸೆ, ಬೈಂದೂರು ತಾಲೂಕು ಯೋಜನಾಧಿಕಾರಿ ಸುರೇಶ್ ಹಾಗೂ ಗ್ರಾಪಂ ಪಿಡಿಒ ಚಂದ್ರ ಬಿಲ್ಲವ ಪ್ರಶಸ್ತಿ ಸ್ವೀಕರಿಸಿದರು.
ಸಾಣೂರು ಗ್ರಾಪಂ: ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಣೂರು ಗ್ರಾ. ಪಂ. ಪುರಸ್ಕಾರಕ್ಕೆ ಆಯ್ಕೆ ಯಾಗಿದ್ದು, 25 ಲಕ್ಷ ರೂ. ನಗದು ಬಹುಮಾನ ಪಡೆದಿದೆ. ಉಡುಪಿ ಜಿಪಂ ಯೋಜನಾಧಿಕಾರಿ ಉದಯ ಕುಮಾರ್ ಶೆಟ್ಟಿ, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ನಿಶ್ಚಿತ್ ಹೆಗ್ಡೆ, ಎಸ್‌ಡಿಜಿ ಯೋಜನಾಧಿಕಾರಿ ಅನಿಲ್ ಶೆಟ್ಟಿ, ಕಾಪು ತಾ.ಪಂ. ಇಒ ವಿಜಯ್, ಗ್ರಾಪಂ ಪಿಡಿಒ ವಿಶ್ವನಾಥ್ ಪ್ರಶಸ್ತಿ ಸ್ವೀಕರಿಸಿದರು.






