ಕುಂದಾಪುರ ತಾಲೂಕಿಗೆ 5 ಗ್ಯಾರಂಟಿಗಳಿಗಾಗಿ 307 ಕೋಟಿ ರೂ. ಬಿಡುಗಡೆ: ಹರಿಪ್ರಸಾದ್ ಶೆಟ್ಟಿ

ಕುಂದಾಪುರ: ಕುಂದಾಪುರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಸಂಬಂಧಿತ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯು ಸಮಿತಿ ಅಧ್ಯಕ್ಷ ಎಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅಧ್ಯಕ್ಷತೆಯಲ್ಲಿ ಸೋಮವಾರ ಕುಂದಾಪುರ ತಾಪಂ ಸಭಾಂಗಣದಲ್ಲಿ ನಡೆಯಿತು.
ಡಿಸೆಂಬರ್ ತಿಂಗಳಿನಲ್ಲಿ 5 ಗ್ಯಾರಂಟಿಗಳಿಗಾಗಿ ಕುಂದಾಪುರ ತಾಲೂಕಿಗೆ 20,52,51,816 ರೂ. ಮೊತ್ತ ಬಿಡುಗಡೆ ಯಾಗಿದೆ. ಪಂಚಯೋಜನೆಗಳು ಅನುಷ್ಠಾನಗೊಂಡ ತರುವಾಯ 2024 ಡಿಸೆಂಬರ್ ತನಕ ಒಟ್ಟು 307 ಕೋಟಿ 64 ಲಕ್ಷದ 4,770 ರೂ. ತಾಲೂಕಿಗೆ ಬಿಡುಗಡೆಯಾಗಿದೆ ಎಂದು ಹರಿಪ್ರಸಾದ್ ಶೆಟ್ಟಿ ತಿಳಿಸಿದರು.
ಕೆಲವೆಡೆ ಸರಕಾರಿ ಬಸ್ಸುಗಳ ನಿರ್ವಾಹಕರು ಮಹಿಳಾ ಪ್ರಯಾಣಿಕರಿಂದ ಟಿಕೇಟ್ ದರ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಹಿಳಾ ಸದಸ್ಯೆ ದೂರಿದರು. ಅಂತಹ ಪ್ರಕರಣಗಳಲ್ಲಿ ದೂರುನೀಡಿದಲ್ಲಿ ಸಂಬಂಧಿತ ಬಸ್ ನಿರ್ವಾಹಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿ ಸಭೆಗೆ ತಿಳಿಸಿದರು.
ಅನಿಮಿಯತವಾಗಿ ವಿದ್ಯುತ್ ಕಡಿತ, ರೇಶನ್ ಕಾರ್ಡ್, ಜಾತಿ-ಆದಾಯ ಪ್ರಮಾಣ ಪತ್ರ ನವೀಕರಣ ಗೊಂದಲ ಮೊದ ಲಾದ ವಿಚಾರಗಳ ಬಗ್ಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಚರ್ಚೆಗಳಾಗಿ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
’ಯುವನಿಧಿ’ ಯೋಜನೆಯಡಿ ಹೆಚ್ಚು ಅಭ್ಯರ್ಥಿಗಳನ್ನು ನೋಂದಣಿ ಮಾಡಲು ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲು ಅಭಿಯಾನ ವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ಯುವನಿಧಿ ನೋಂದಣಿ ಅಭಿಯಾನದ ಬಗೆಗಿನ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ವಸುಂಧರ ಹೆಗ್ಡೆ ಹೆಂಗವಳ್ಳಿ, ವಾಣಿ ಆರ್.ಶೆಟ್ಟಿ ಮೊಳಹಳ್ಳಿ, ನಾರಾಯಣ ಆಚಾರ್ ಕೋಣಿ, ಅಭಿಜಿತ್ ಪೂಜಾರಿ ಹೇರಿಕುದ್ರು, ಮಂಜು ಕೊಠಾರಿ ಕೆರಾಡಿ, ಗಣೇಶ್ ಕುಂದಾಪುರ, ಆಶಾ ಕರ್ವೆಲ್ಲೋ ಕುಂದಾಪುರ, ಸವಿತಾ ಪೂಜಾರಿ ಚಿತ್ತೂರು, ಜಹೀರ್ ಅಹಮದ್ ಗಂಗೊಳ್ಳಿ, ಚಂದ್ರ ಕಾಂಚನ್ ಜನ್ನಾಡಿ, ಅರುಣ್ ಹಕ್ಲಾಡಿ ಮತ್ತು ವಿವಿಧ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು. ತಾಪಂ ಕಾರ್ಯನಿರ್ವಹಣಾಧಿ ಕಾರಿ ಡಾ.ರವಿಕುಮಾರ್ ಹುಕ್ಕೇರಿ ಸ್ವಾಗತಿಸಿ, ವಂದಿಸಿದರು.
ಬಸ್ ಸಂಚಾರ ಪುನರಾರಂಭಿಸಲು ನಿರ್ಣಯ
ಈ ಮೊದಲು ಹುಣಸೂರು ಡಿಪೋದಿಂದ ಹೊರಡುತ್ತಿದ್ದ ಕೊಲ್ಲೂರು- ಮೈಸೂರು ಸರಕಾರಿ ಬಸ್ಸಿನಿಂದ ಯಾತ್ರಾರ್ಥಿಗಳಿಗೆ ಅನುಕೂಲವಾಗುತ್ತಿತ್ತು. ಕೋವಿಡ್ ಬಳಿಕ ಸಂಚಾರ ಸ್ಥಗಿತಗೊಂಡಿದ್ದು, ಆ ಬಸ್ಸನ್ನು ಪುನರಾರಂಭಿಸು ವಂತೆ ಇಲಾಖೆಯ ಅಧಿಕಾರಿಗಳಿಗೆ ಅಧ್ಯಕ್ಷ ಎಚ್.ಹರಿಪ್ರಸಾದ್ ಶೆಟ್ಟಿ ತಿಳಿಸಿದರು.
ಸಿಬ್ಬಂದಿಗಳ ಕೊರತೆಯ ಸಬೂಬು ಹೇಳಿ ಬಸ್ಸನ್ನು ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಆ ಬಸ್ಸು ಮಂಗಳೂರಿನಿಂದ ಮೈಸೂರಿಗೆ ಸಂಚರಿಸುತ್ತಿದ್ದು, ಆ ಬಸ್ಸಿನ ಸಂಚಾರವನ್ನು ಕೊಲ್ಲೂರಿನವರೆಗೆ ವಿಸ್ತಿರಿಸಬೇಕು. ಅಲ್ಲದೆ ಕೊಲ್ಲೂರಿನಲ್ಲಿ ಸರಕಾರಿ ಬಸ್ ನಿಲುಗಡೆಗೆ ಅವಕಾಶವಿಲ್ಲದಿದ್ದು ಈ ಬಗ್ಗೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಜೊತೆ ಸೂಕ್ತ ಕ್ರಮಕ್ಕೆ ಚರ್ಚಿಸಲಾಗುತ್ತದೆ ಎಂದರು.







