ಯಕ್ಷಗಾನ ಕಲಾರಂಗದಿಂದ 50ನೇ ಮನೆ ಬಡಕುಟುಂಬಕ್ಕೆ ಹಸ್ತಾಂತರ

ಉಡುಪಿ: ಕಾರ್ಕಳ ತಾಲೂಕಿನ ಬಜಗೋಳಿ ಸಮೀಪದ ನೂರಾಲ್‌ಬೆಟ್ಟಿನ ಬಡಕುಟುಂಬದ ಪ್ರತಿಭಾನ್ವಿತ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಚೈತ್ರಾ ಅವರಿಗೆ ದಾನಿಗಳ ನೆರವಿನಿಂದ ಉಡುಪಿಯ ಯಕ್ಷಗಾನ ಕಲಾರಂಗ ನಿರ್ಮಿಸಿದ ಸರಳ, ಸುಂದರ ಮನೆಯನ್ನು ಬುಧವಾರ ನಡೆದ ಸರಳ ಸಮಾರಂಭದಲ್ಲಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಉಡುಪಿಯ ನಿವೃತ್ತ ಶಿಕ್ಷಕ ಯು.ಎಸ್.ರಾಜಗೋಪಾಲ ಆಚಾರ್ಯ ಹಾಗೂ ಸುಶೀಲಾ ಆರ್. ಆಚಾರ್ಯ ದಂಪತಿ ತಮ್ಮ ವಿವಾಹದ ಸುವರ್ಣ ಸಂಭ್ರಮಾಚರಣೆಯ ಸವಿನೆನಪಿನಲ್ಲಿ ಸುಮಾರು 7 ಲಕ್ಷ ರೂ.ವೆಚ್ಚದಲ್ಲಿ ವಿದ್ಯಾಪೋಷಕ್‌ನ ವಿದ್ಯಾರ್ಥಿನಿಗೆ ನಿರ್ಮಿಸಿಕೊಟ್ಟ ‘ಶ್ರೀನಿಲಯ’ ಮನೆಯನ್ನು ಉಡುಪಿಯ ಸೋದೆ ವಾದಿರಾಜ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅನುಗ್ರಹ ಸಂದೇಶ ನೀಡಿದ ಸೋದೆ ವಾದಿರಾಜ ಮಠಾಧೀಶರು ಯಕ್ಷಗಾನ ಕಲಾರಂಗದ ಸದಸ್ಯರ ಪ್ರಾಮಾಣಿಕ ಮತ್ತು ಕ್ರಿಯಾಶೀಲ ನಡೆಗೆ ಸಮಾಜ ಉತ್ತಮವಾಗಿ ಸ್ಪಂದಿಸುತ್ತಿದೆ ಎಂದರಲ್ಲದೇ, ಸಂಸ್ಥೆಯೊಂದು ನಿಸ್ಪಹತೆ ಯಿಂದ ಕೆಲಸ ಮಾಡಿದರೆ ಸಮಾಜ ಅದನ್ನು ಪ್ರೋತಾಹಿಸುತ್ತದೆ ಎಂಬುದಕ್ಕೆ ಯಕ್ಷಗಾನ ಕಲಾರಂಗಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ ಎಂದರು.
ಪಿಯುಸಿ ವಿದ್ಯಾರ್ಥಿನಿ ಚೈತ್ರಾಳಿಗೆ ತಮ್ಮ ಶ್ರೀಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಿ ಅದರ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಇದೇ ವೇಳೆ ಸ್ವಾಮೀಜಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮನೆ ನಿರ್ಮಾಣದಲ್ಲಿ ಅವಿರತ ವಾಗಿ ಶ್ರಮಿಸುತ್ತಿರುವ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಅವರಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.
ಮನೆಯ ಪ್ರಾಯೋಜಕರಾದ ಯು.ಎಸ್. ರಾಜಗೋಪಾಲ ಆಚಾರ್ಯ ಮಾತನಾಡಿದರು. ವೇದಿಕೆಯಲ್ಲಿ ಸುಶೀಲಾ ಆಚಾರ್ಯ, ವೇಣುಗೋಪಾಲ ಭಟ್, ಡಾ.ಜೆ.ಎನ್.ಭಟ್, ಯು.ಶ್ರೀಧರ್, ಗುರುರಾಜ ಆಚಾರ್ಯ, ಮಾಧವ ಆಚಾರ್ಯ, ಪ್ರಸಾದ್ ರಾವ್, ಭಾಗ್ಯಲಕ್ಷ್ಮೀ ಪಿ.ರಾವ್, ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ, ಪ್ರೊ. ಕೆ. ಸದಾಶಿವರಾವ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಛಾಯಾಗ್ರಾಹಕ ಗಣೇಶ್ ಎನ್. ಅಮೀನ್‌ರನ್ನು ಶಾಲು, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು.ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತು ಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು.







