ಪರ್ಯಾಯ: ಉಡುಪಿ ನಗರಸಭೆಯಿಂದ 50ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವ ವನ್ನು ನಾಡಹಬ್ಬ ದಸರಾ ಮಾದರಿಯಲ್ಲಿ ಸಂಭ್ರಮಾಚರಣೆ ನಡೆಸುವ ಉದ್ದೇಶದಿಂದ ಈ ಬಾರಿಯ ಪರ್ಯಾಯ ಮಹೋತ್ಸವಕ್ಕೆ ಉಡುಪಿಯ ನಗರಸಭೆ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ನಗರದ ಮುಖ್ಯ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಅನುದಾನ ಮೀಸಲಿಡಿಸುವ ಮೂಲಕ ಪರ್ಯಾಯ ಉತ್ಸವಕ್ಕೆ ವಿಶೇಷ ಮೆರುಗು ನೀಡಲಾಗುವುದು ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.
ಈ ಬಾರಿಯಿಂದ ಮುಂದಿನ ಎಲ್ಲಾ ಪರ್ಯಾಯ ಮಹೋತ್ಸವಕ್ಕೆ ಉಡುಪಿ ನಗರ ಸಭೆಯಿಂದಲೇ ಅನು ದಾನ ಮೀಸಲಿಡಲು ನಿರ್ಣಯ ಮಾಡಲಾಗಿದೆ. ದೇಶ ವಿದೇಶದಿಂದ ಆಗಮಿಸುವ ಸಾವಿರಾರು ಭಕ್ತಾದಿಗಳು ಉಡುಪಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ನಗರ ಅಲಂಕಾರಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಈಗಾಗಲೇ ಪರ್ಯಾಯ ಪೂರ್ವಭಾವಿಯಾಗಿ ಉಡುಪಿ ನಗರದ ರಸ್ತೆ, ಚರಂಡಿ, ಸ್ವಚ್ಚತೆ ಸಹಿತ ಮೂಲ ಸೌಕರ್ಯ ಅಭಿ ವೃದ್ಧಿ ಕಾಮಗಾರಿಗಳಿಗೆ 25 ಕೋಟಿ ವಿಶೇಷ ಅನುದಾನ ನೀಡುವಂತೆ ರಾಜ್ಯ ಸರಕಾರಕ್ಕೆ ಹಾಗೂ ತುರ್ತು ಕಾಮಗಾರಿಗ ಉಡುಪಿ ನಗರಸಭೆ ವತಿಯಿಂದ 5 ಕೋಟಿ ಮೀಸಲಿರಿಸುವಂತೆ ಮನವಿ ಮಾಡಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





