ಬಂಟಕಲ್ಲು ವಿದ್ಯಾರ್ಥಿಗಳಿಂದ 500ಕೆಜಿ ಇ ತ್ಯಾಜ್ಯ ಸಂಗ್ರಹ

ಉಡುಪಿ: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್‌ಕ್ರಾಸ್ ಘಟಕವು ನಿರಂತರ ಎರಡನೇ ವರ್ಷದ ವಾರ್ಷಿಕ ಇ- ತ್ಯಾಜ್ಯ ಸಂಗ್ರಹ ಅಭಿಯಾನವನ್ನು ನಡೆಸಿತು.
ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್‌ಕ್ರಾಸ್ ಘಟಕವು ಈ ಅಭಿಯಾನದಲ್ಲಿ ಸುಮಾರು 500 ಕಿಲೋ ಗ್ರಾಂಗೂ ಹೆಚ್ಚು ಇ - ತ್ಯಾಜ್ಯವನ್ನು ಸಂಗ್ರಹಿಸಿತು. ಸಂಗ್ರಹಿಸಲಾದ ಇ-ತ್ಯಾಜ್ಯವನ್ನು ಮಾನ್ಯತೆ ಪಡೆದ ಮರು ಬಳಕೆಯ ಸಂಸ್ಥೆಗೆ ಹಸ್ತಾಂತರಿಸಲಾಗಿದ್ದು ಸುರಕ್ಷತೆ ಮತ್ತು ಪರಿಸರ ಸ್ನೇಹಿ ವಿಲೇವಾರಿ ಕ್ರಮವನ್ನು ಕೈಗೊಂಡಿದೆ.
ಅನಿಯಂತ್ರಿತ ಇ- ತ್ಯಾಜ್ಯ ವಿಲೇವಾರಿಯಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸು ವುದು ಮತ್ತು ಶಾಶ್ವತ ಪರಿಸರ ಸ್ನೇಹಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಸ್ವಯಂಸೇವಕರು ಇ - ತ್ಯಾಜ್ಯ ಮರು ಬಳಕೆಯ ವಿಧಾನಗಳು ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ಅಗತ್ಯತೆಯ ಕುರಿತು ಜಾಗೃತಿ ಮೂಡಿಸಿದರು.




