ಸಂಜೀವಿನಿ ಸ್ವ-ಸಹಾಯ ಸಂಘಗಳಿಗೆ 51 ಕೋಟಿ ರೂ. ಶೂನ್ಯ ಬಡ್ಡಿ ಸಾಲ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಅಂದಾಜು 8,454 ಸ್ವ-ಸಹಾಯ ಸಂಘಗಳಿದ್ದು, ಇವುಗಳಲ್ಲಿ ಸುಮಾರು 85,000 ಸದಸ್ಯ ರನ್ನು ಸಂಜೀವಿನಿ ಸಂಘಗಳು ಹೊಂದಿವೆ. ಪಂಚಾಯತ್ ಮಟ್ಟದ ಸಂಜೀವಿನಿ ಸ್ವ-ಸಹಾಯ ಸಂಘಗಳಿಗೆ ಆರ್ಥಿಕ ವ್ಯವ ಹಾರ ಮಾಡಲು ಕೇಂದ್ರ ಸರಕಾರ ಪ್ರತಿ ಸಂಘಕ್ಕೆ 1.50 ಲಕ್ಷ ರೂ.ನಂತೆ 51 ಕೋಟಿ ರೂ. ಶೂನ್ಯ ಬಡ್ಡಿಯ ಸಾಲದ ನೆರವು ನೀಡುತ್ತಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸಂಜೀವಿನಿ ಸ್ವ-ಸಹಾಯ ಗುಂಪುಗಳ ಆರ್ಥಿಕ ಸೇರ್ಪಡೆಗಾಗಿ ನಡೆದ ಬ್ಯಾಂಕರ್ಸ್ ಕಾರ್ಯಾಗಾರ ಮತ್ತು ಮಾಹಿತಿ ಶಿಬಿರ ವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ 2 ಉತ್ಪಾದನಾ ಕಂಪೆನಿಗಳು ಸ್ಥಾಪನೆಯಾಗಿದ್ದು, ಕಾರ್ಯ ನಿರ್ವಹಿಸುತ್ತಿವೆ. ಕಳೆದ 3 ವರ್ಷಗಳಲ್ಲಿ ಸಂಜೀವಿನಿ ಸ್ವ-ಸಹಾಯ ಸಂಘದ ಆರ್ಥಿಕ ವಹಿವಾಟು 91 ಕೋಟಿ ರೂ.ಮೀರಿದೆ. ಸಂಜೀವಿನಿ ಸಂಘಗಳು 7 ಕಡೆ ಉತ್ಪಾದನಾ ಮಾರಾಟ ಕೇಂದ್ರಗಳನ್ನು ಸ್ಥಾಪಿಸಿವೆ. ಪ್ರತಿ ಪಂಚಾಯತ್ ನಲ್ಲೂ ಕೃಷಿ ಸಖಿ, ಪಶು ಸಖಿ ಮತ್ತು ಎಂಬಿಕೆ, ಎಲ್‌ಸಿಆರ್‌ಪಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಪಂಚಾಯತ್ ಮಟ್ಟದ ಆಡಳಿತ ಸಬಲೀಕರಣಕ್ಕೆ ಕಾರಣವಾಗಿವೆ ಎಂದವರು ಹೇಳಿದರು.
ಸುಮಾರು 85,000 ಸದಸ್ಯರ ಪೈಕಿ, ಪ್ರತಿ ಸದಸ್ಯರು ಕೇಂದ್ರ ಸರ್ಕಾರದ ಯೋಜನೆಯ ಮೂಲಕ ಸರಳವಾದ ವಿಮಾ ಸೌಲಭ್ಯ ಹೊಂದಬೇಕಿದ್ದು, ರಾಷ್ಟ್ರೀಕೃತ ಬ್ಯಾಂಕುಗಳು, ಇತರೆಲ್ಲಾ ಆರ್ಥಿಕ ಸಂಸ್ಥೆಗಳು ಸ್ವಸಹಾಯ ಸಂಘಗಳ ನೆರವಿಗೆ ಬರಬೇಕಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಮಾಡಿದರು.
ಸ್ವ-ಸಹಾಯ ಸಂಘಗಳು ಮುಂದಿನ ದಿನಗಳಲ್ಲಿ ಪ್ರಬಲ ಗ್ರಾಮೀಣ ಆರ್ಥಿಕ ಸಂಸ್ಥೆಗಳಾಗಿ ಮಾರ್ಪಡುವ ಅವಕಾಶವಿದ್ದು, ಇವುಗಳ ಏಳಿಗೆಗೆ ಬ್ಯಾಂಕ್ ಅಧಿಕಾರಿಗಳು ಸಹಕಾರ ನೀಡಬೇಕೆಂದು ಕೋಟ ಆಗ್ರಹಿಸಿದರು.
ಕಾರ್ಯಾಗಾರದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಕೌಶಲ್ಯಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಎನ್‌ಆರ್‌ಎಲ್‌ಎಮ್ ಯೋಜನೆಯ ಜಿಲ್ಲಾ ಸಮನ್ವಯಾಧಿಕಾರಿ ನವ್ಯ, ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ಉಪಸ್ಥಿತರಿದ್ದರು.







