ಉಡುಪಿ ನಗರಸಭೆಯಿಂದ 5.17ಕೋಟಿ ರೂ. ಮಿಗತೆಯ ಬಜೆಟ್ ಮಂಡನೆ

ಉಡುಪಿ, ಮಾ.15: ಉಡುಪಿ ನಗರಸಭೆಯ 2025-26ನೆ ಸಾಲಿನ 5.17ಕೋಟಿ ರೂ. ಮಿಗತೆಯ ಆಯವ್ಯಯ ಮುಂಗಡ ಪತ್ರವನ್ನು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಶನಿವಾರ ಮಂಡಿಸಿದರು.
ಮೂರು ವರ್ಷ(2022ರ ಮಾ.30)ಗಳ ಬಳಿಕ ಮಂಡಿಸಿದ ಈ ಬಾರಿಯ ಮುಂಗಡ ಪತ್ರದಲ್ಲಿ ಒಟ್ಟು 250.63ಕೋಟಿ ರೂ. ಆದಾಯ (ಆರಂಭದ ಶಿಲ್ಕು 107.57ಕೋಟಿ ರೂ. ಮತ್ತು ಒಟ್ಟು ಸ್ವೀಕೃತಿಗಳು 143.06 ಕೋಟಿ ರೂ.) ಹಾಗೂ 245.46ಕೋಟಿ ರೂ. ಒಟ್ಟು ವೆಚ್ಚಗಳನ್ನು ತೋರಿಸ ಲಾಗಿದೆ.
ಆದಾಯಗಳ ಅಂದಾಜು
ಕೇಂದ್ರ ಹಾಗೂ ರಾಜ್ಯ ಹಣಕಾಸು ಆಯೋಗಗಳ ಅನುದಾನ ಒಟ್ಟು 31.29ಕೋಟಿ ರೂ., ಎಸ್‌ಎಫ್‌ಸಿ ವಿಶೇಷ ಅನುದಾನ 3ಕೋಟಿ, ಸ್ವಚ್ಛ ಭಾರತ್ ಮಿಷನ್ ಅನುದಾನ 3.42ಕೋಟಿ ರೂ., ಗೃಹ ಭಾಗ್ಯ ಯೋಜನೆ 50ಲಕ್ಷ ರೂ., ಪಾರಂಪರಿಕ ತ್ಯಾಜ್ಯ ನಿರ್ವಹಣೆ ಅನುದಾನ 2.56ಕೋಟಿ ರೂ. ಆದಾಯ ಅಂದಾಜಿಸಲಾಗಿದೆ.
ಸಂಸತ್/ವಿಧಾನಸಭಾ ಸದಸ್ಯರ ಅನುದಾನ 5ಲಕ್ಷ ಹಾಗೂ ಅದಿಭಾರ ಶುಲ್ಕ 30ಲಕ್ಷ ರೂ., ಇಂದಿರಾ ಕ್ಯಾಂಟಿನ್ ನಿರ್ವಹಣೆ ಅನುದಾನ 10ಲಕ್ಷ ರೂ., ವೆಂಡರ್‌ರೆನ ನಿರ್ಮಾಣ ಅನುದಾನ 1ಕೋಟಿ ರೂ. ಮತ್ತು ನಗರಸಭಾ ಆಸ್ತಿ ತೆರಿಗೆಯಿಂದ ಸರಾಸರಿ 25.20ಕೋಟಿ ರೂ., ಉದ್ದಿಮೆ ಪರವಾನಿಗೆ ಶುಲ್ಕ 1.50ಕೋಟಿ ಮತ್ತು ಜಾಹೀರಾತು ಶುಲ್ಕ 22ಲಕ್ಷ ರೂ., ಕಟ್ಟಡ ಪರವಾನಿಗೆ ಶುಲ್ಕ 50ಲಕ್ಷ ರೂ., ಅಭಿವೃದ್ಧಿ ಶುಲ್ಕ 50ಲಕ್ಷ ರೂ., ನೀರು ಸರಬರಾಜು ಶುಲ್ಕದಿಂದ 19ಕೋಟಿ ರೂ., ವಾಣಿಜ್ಯ ಸಂಕೀರ್ಣಗಳಿಂದ 2ಕೋಟಿ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ.
ವೆಚ್ಚಗಳ ಅಂದಾಜು
ಕಚೇರಿಯ ಆಡಳಿತಾತ್ಮಕ ವೆಚ್ಚಗಳಿಗೆ 3.29ಕೋಟಿ, ಲೋಕೋಪಯೋಗಿ ಕಾಮಗಾರಿಗಳಿಗೆ ನಗರಸಭಾ ನಿಧಿಯಿಂದ 6ಕೋಟಿ, ರಸ್ತೆ ಕಾಮಗಾರಿಗಳಿಗೆ 30ಕೋಟಿ ರೂ., ದಾರಿದೀಪಗಳ ದುರಸ್ತಿ ಹಾಗೂ ನಿರ್ವ ಹಣೆಗೆ 6.10ಕೋಟಿ, ಹೊಸ ದಾರಿ ದೀಪ ಅಳವಡಿಕೆಗೆ 1.85 ಕೋಟಿ ರೂ., ನೀರು ಸರಬರಾಜಿಗೆ ಸಂಬಂಧಿಸಿ 12.53ಕೋಟಿ ರೂ., ಹೊಸ ಪೈಪ್‌ಲೈನ್, ಕೆರೆ ಅಭಿವೃದ್ಧಿ, ನೀರು ವಿತರಣೆಗೆ 4.98ಕೋಟಿ ರೂ. ಮೀಸಲಿರಿಸಲಾಗಿದೆ.
ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆಗೆ 26.07 ಕೋಟಿ ರೂ., ಆರೋಗ್ಯಕ್ಕೆ ಸಂಬಂಧಿಸಿ 1.85 ಕೋಟಿ ರೂ., ಒಳಚರಂಡಿ ಯೋಜನೆಗಳಿಗೆ 9.89ಕೋಟಿ ರೂ. ನಿಗದಿಪಡಿಸಲಾಗಿದೆ. ಉದ್ಯಾನವನಗಳಿಗೆ 2.50ಕೋಟಿ ರೂ., ಸ್ಮಶಾನಗಳ ಅಭಿವೃದ್ಧಿಗಾಗಿ 25ಲಕ್ಷ ರೂ., ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶ್ರೇಯೋಭಿವೃದ್ಧಿ ನಿಧಿ 2.07ಕೋಟಿ ರೂ., ವಿಕಲಚೇತನರ ಕಲ್ಯಾಣ ನಿಧಿ 34.49ಲಕ್ಷ ರೂ. ಲಕ್ಷ ರೂ., ಬಡ ಜನರ ಕಲ್ಯಾಣ ನಿಧಿಗೆ 50ಲಕ್ಷ ರೂ.ವನ್ನು ಕಾದಿರಿಸಲಾಗಿದೆ.
ಅಭಿವೃದ್ಧಿ ಕಾರ್ಯಕ್ರಮಗಳು
ನಗರದ ವಿಶ್ವೇಶ್ವರಯ್ಯ ಮಾರುಕಟ್ಟೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜನೆ, 33 ಟನ್ ಸಾಮರ್ಥ್ಯದ ಎಂ.ಆರ್‌ಎಫ್ ಘಟಕ ನಿರ್ಮಾಣಕ್ಕೆ 4.45ಕೋಟಿ ರೂ. ಅಂದಾಜು ಮೊತ್ತಕ್ಕೆ ಡಿಪಿಆರ್ ತಯಾರಿಸಲಾಗಿದೆ.
ಉಡುಪಿ ನಗರದ ವಾಹನ ಮತ್ತು ಜನ ಸಂಚಾರಕ್ಕೆ ಅನುಕೂಲ ಕಲ್ಪಿಸುವ ದೃಷ್ಠಿಯಿಂದ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ವೃತ್ತಗಳು ಮತ್ತು ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಲಾಗುವುದು. ಹಿರಿಯ ನಾಗರಿಕರಿಗೆ ಅನು ಕೂಲವಾಗುವಂತೆ ಸಾಧ್ಯ ಇರುವಲ್ಲಿ ರಸ್ತೆಗಳಿಗೆ ಪುಟ್‌ಪಾತ್ ರಚಿಸಿ ರೇಲಿಂಗ್ ಅಳವಡಿಸಲಾಗುವುದು. ರಸ್ತೆ ಅಗಲೀಕರಣಕ್ಕೆ ಪ್ರಥಮ ಪ್ರಾಶಸ್ತ್ಯ ನೀಡ ಲಾಗುವುದು ಎಂದು ಪ್ರಭಾಕರ ಪೂಜಾರಿ ಮುಂಗಡ ಪತ್ರದಲ್ಲಿ ತಿಳಿಸಿದ್ದಾರೆ.
ಬಳಿಕ ನಡೆದ ಚರ್ಚೆಯಲ್ಲಿ ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ಸದಸ್ಯರಾದ ಅಮೃತ ಕೃಷ್ಣಮೂರ್ತಿ, ಸುಮಿತ್ರಾ ಆರ್.ನಾಯಕ್, ಕೃಷ್ಣರಾಜ್ ಕೊಡಂಚ, ಗಿರೀಶ್ ಅಂಚನ್, ವಿಜಯ ಕೊಡವೂರೂ ಮೊದಲಾದವರು ಪಾಲ್ಗೊಂಡರು.
ಸಭೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್ ಕಲ್ಮಾಡಿ, ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ವೆಂಡರ್ ಝೋನ್ ನಿರ್ಮಾಣ
ಮಣಿಪಾಲ ಜ್ಯೂನಿಯರ್ ಕಾಲೇಜು ಬಳಿ, ಅಜ್ಜರಕಾಡು ಕಸ್ತೂರ್ಬಾ ನಗರ ರಸ್ತೆ ಮತ್ತು ಮಲ್ಪೆ ಬೀಚ್ ಬಳಿ ವೆಂಡರ್ ಝೋನ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ನಗರದ ಪಾರ್ಕಿಂಗ್ ಸಮಸ್ಯೆ ಬಗ್ಗೆ ಮತ್ತು ಸಿಟಿ ಬಸ್ ನಿಲ್ದಾಣದ ಉನ್ನತಿಕರಣಗೊಳಿಸಲು ಕ್ರಮ ವಹಿಸ ಲಾಗುವುದು. ದಿನದ ಸಂತೆ ಮಾರುಕಟ್ಟೆಯನ್ನು ಸಿಟಿ ಬಸ್ ನಿಲ್ದಾಣದ ಮೇಲ್ಛಾವಣಿ ಮೇಲೆ ಸುಸಜ್ಜಿತವಾಗಿ ನಿರ್ಮಿಸಲಾಗುವುದು ಎಂದು ಪ್ರಭಾಕರ ಪೂಜಾರಿ ಮುಂಗಡ ಪತ್ರದಲ್ಲಿ ತಿಳಿಸಿದರು.
ಜಂಕ್ಷನ್‌ಗಳಲ್ಲಿ ಸಿಗ್ನಲ್ ಲೈಟ್ ಅಳವಡಿಕೆ
ನಗರದ ಪ್ರಮುಖ ಸ್ಥಳಗಳಲ್ಲಿ ಸೋಲಾರ್ ಲೈಟ್ ಮತ್ತು ಜಂಕ್ಷನ್‌ಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸಲಾ ಗುವುದು. ಉಡುಪಿ ನಗರಸಭೆ ಸಮೀಪದ ಗ್ರಾಪಂಗಳನ್ನು ಸೇರಿ ಮಹಾನಗರ ಪಾಲಿಕೆ ಘೋಷಣೆಯಾ ಗುವ ಹಂತದಲ್ಲಿದೆ. ಉಡುಪಿ ನಗರಸಭೆಯನ್ನು ನಾಗರಿಕ ಸ್ನೇಹಿ ಮಾಡುವ ಬಗ್ಗೆ ಒತ್ತು ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದರು.
ಎಸ್‌ಟಿಪಿಯಿಂದ ಕೊಳಚೆ ನೀರನ್ನು ಉತ್ತಮ ತಂತ್ರಜ್ಞಾನ ಅಳವಡಿಸಿ ಶುದ್ಧಿಕರಿಸಿ ಸಮುದ್ರಕ್ಕೆ ಬಿಡುವ ಯೋಜನೆ ರೂಪಿಸಲಾಗುವುದು. ತೆಂಕಪೇಟೆ ಮತ್ತು ಬಡಗುಪೇಟೆಗಳ ಪಾರಂಪರಿಕ ಕಟ್ಟಡಗಳನ್ನು ಉಳಿ ಸಲು ಕ್ರಮ ಕೈಗೊಳ್ಳಲಾಗುವುದು. ವಾರಾಹಿ ಕುಡಿಯುವ ನೀರು ಸರಬರಾಜು ಯೋಜನೆ ಈಗಾಗಲೇ ಅಂತಿಮ ಹಂತದಲ್ಲಿದ್ದು, ನಾಗರಿಕರಿಗೆ ದಿನದ 24ಗಂಟೆ ಕುಡಿಯುವ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.







