ಎಸ್‌ಐಆರ್: ಉಡುಪಿ ಜಿಲ್ಲೆಯಲ್ಲಿ 54,458 ಗಣತಿ ನಮೂನೆ ವಿತರಣೆ

ಉಡುಪಿ, ಜು.1: ಉಡುಪಿ ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಎರಡನೇ ದಿನದ ಕೊನೆಗೆ ಜಿಲ್ಲೆಯಲ್ಲಿರುವ ಒಟ್ಟು 10,63,876 ಮತದಾರರ ಪೈಕಿ 54,458 ಮಂದಿಗೆ ಗಣತಿ ನಮೂನೆ (ಎನ್ಯೂಮರೇಷನ್ ನಮೂನೆ)ಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಇದು ಒಟ್ಟಾರೆ ಗುರಿಯ ಶೇ.5.12 ರಷ್ಟಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ 1,112 ತರಬೇತಿ ಪಡೆದ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ಗಣತಿ ನಮೂನೆಗಳನ್ನು ವಿತರಿಸಲು ನಿಯೋಜಿಸಲಾಗಿದ್ದು, ಇವರು ಕ್ಷೇತ್ರದ ಪ್ರತಿ ಮನೆಮನೆಗೂ ಭೇಟಿ ನೀಡಿ ನಮೂನೆಗಳನ್ನು ವಿತರಿಸುವ ಕಾರ್ಯ ಮಾಡುತಿದ್ದಾರೆ ಎಂದವರು ತಿಳಿಸಿದ್ದಾರೆ.
ಮನೆ ಮನೆ ಭೇಟಿ ಅಭಿಯಾನವು ಜೂನ್30ರಿಂದ ಪ್ರಾರಂಭಗೊಂಡು ಜುಲೈ 29ರವರೆಗೆ ನಡೆಯವಲಿದೆ. ಸಲ್ಲಿಕೆಯಾದ ನಮೂನೆಗಳ ಡಿಜಿಟಲೀಕರಣವು ಜೂ.30ರಿಂದ ಜುಲೈ 29ರವರೆಗೆ ನಡೆಯಲಿದೆ.
ಉಡುಪಿ ಜಿಲ್ಲೆಯಲ್ಲಿ ಜುಲೈ 1ರವರೆಗೆ ನಡೆದ ಎಸ್‌ಐಆರ್ ಪ್ರಕ್ರಿಯೆ ಸಾಧನೆ ಹೀಗಿದೆ:
ವಿಧಾನಸಭಾಕ್ಷೇತ್ರ - ಒಟ್ಟು ಮತದಾರರು - ವಿತರಿಸಿದ ನಮೂನೆ
118.ಬೈಂದೂರು - 2,41,863 - 11,197
119.ಕುಂದಾಪುರ - 2,12,473 - 09,687
120.ಉಡುಪಿ - 2,21,680 - 11,782
121.ಕಾಪು - 1,94,718 - 10,689
122.ಕಾರ್ಕಳ - 1,93,142 - 11,103
ಒಟ್ಟು - 10,63,876 - 54,458






