ಆನ್‌ಲೈನ್‌ನಲ್ಲಿ ಮಹಿಳೆಗೆ 5.70 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಕುಂದಾಪುರ, ಜೂ.4: ಪಿಎಂಜಿಡಿವೈಯಲ್ಲಿ ಲೋನ್ ಕೊಡಿಸುವುದಾಗಿ ಮಹಿಳೆಯೊಬ್ಬರನ್ನು ನಂಬಿಸಿ ಅವರಿಂದ ಆನ್‌ಲೈನ್ ಮೂಲಕ 5,69,069 ರೂ.ಗಳನ್ನು ಪೋನ್‌ಪೇ ಮೂಲಕ ಪಡೆದು ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ಕಸಬ ಗ್ರಾಮದ ಕೆಳ ಖಾರ್ವಿಕೇರಿಯ ಪ್ರಣೀತ ಅವೇರ ವಂಚನೆಗೊಳಗಾದ ಮಹಿಳೆ. ಇವರು ಮಾ.10ರಂದು ಮೊಬೈಲ್‌ನಲ್ಲಿ ಪೇಸ್‌ಬುಕ್ ನೋಡುತಿದ್ದಾಗ ಪಿಎಂಜಿಡಿವೈಯಲ್ಲಿ ಲೋನ್ ಕೊಡಿಸುವುದಾಗಿ ತಿಳಿಸಿದ್ದು, ಇದಕ್ಕಾಗಿ ನಿರ್ದಿಷ್ಟ ನಂಬರ್‌ಗೆ ಕರೆ ಮಾಡುವಂತೆ ತಿಳಿಸಲಾಗಿತ್ತು.
ಇದರಂತೆ ಪ್ರವೀಣ ನಂಬರ್‌ಗೆ ಕರೆ ಮಾಡಿದಾಗ ಶ್ರೀನಿವಾಸ ರಾವ್ ಎಂಬವರು ಮಾತನಾಡಿ 40 ಲಕ್ಷ ರೂ.ವರೆಗೆ ಲೋನ್ ಕೊಡಿಸುವುದಾಗಿ ತಿಳಿಸಿದ್ದರು. ಇದಕ್ಕಾಗಿ ಮೊದಲು ಹಣ ಹಾಕಬೇಕು ಎಂದು ನಂಬಿಸಿದ್ದು, ಅದರಂತೆ ಅವರು ಮಾ.11ರಿಂದ ಎ.13ರವರೆಗೆ ಒಟ್ಟು 5.69ಲಕ್ಷ ರೂ.ಗಳನ್ನು ಪೋನ್ ಪೇ ಮೂಲಕ ಆತ ತಿಳಿಸಿದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದರು.
ಆದರೆ ಆತ ಯಾವುದೇ ಹಣವನ್ನು ಲೋನ್ ರೂಪದಲ್ಲಿ ನೀಡಲಿಲ್ಲ. ಇದರಿಂದ ಪ್ರವೀಣ ತಮ್ಮ ಹಣ ವಾಪಾಸು ನೀಡುವಂತೆ ಕೇಳಿದಾಗ, ಮತ್ತಷ್ಟು ಹಣ ಹಾಕುವಂತೆ ಸೂಚಿಸಿದ್ದರು. ಇದರಿಂದ ತಾವು ಮೋಸ ಹೋಗಿರುವುದನ್ನು ತಿಳಿದ ಪ್ರವೀಣ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.






