ಗ್ರಾಮ ಆಡಳಿತ ಅಧಿಕಾರಿಗಳ ಧರಣಿ 6ನೇ ದಿನಕ್ಕೆ

ಕುಂದಾಪುರ, ಫೆ.14: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳು ಕುಂದಾಪುರದ ಮಿನಿ ವಿಧಾನಸೌಧದ ಎದುರು ಕುಂದಾಪುರ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಸೋಮವಾರದಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ 5ನೇ ದಿನವಾದ ಶುಕ್ರವಾರವೂ ಮುಂದುವರೆದಿದೆ.
ಇಂದು ಕುಂದಾಪುರ ತಾಲೂಕು ಎನ್.ಪಿ.ಎಸ್ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿಯವರು ಮನವಿಯನ್ನು ಸ್ವೀಕರಿಸಿ ಮುಷ್ಕರಕ್ಕೆ ತಮ್ಮ ಸಂಘಟನೆಯ ಬೆಂಬಲ ಸೂಚಿಸಿದರು.
ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು 5ನೇ ದಿನದ ಮುಷ್ಕರಕ್ಕೆ ಆಗಮಿಸಿದ್ದು ವಿಎ ಅವರ ಬೇಡಿಕೆಗಳು ನ್ಯಾಯಯುತವಾಗಿವೆ ಇದನ್ನು ಸರಕಾರದ ಮಟ್ಟದಲ್ಲಿ ಗಮನ ಸೆಳೆಯುವುದಾಗಿ ಆಶ್ವಾಸನೆ ನೀಡಿದರು. ಕುಂದಾಪುರ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ., ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮುಷ್ಕರ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು.
ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆಯ ರಾಜ್ಯಾಧ್ಯಕ್ಷ ಉದಯ ಕುಮಾರ್ ತಲ್ಲೂರು ಮನವಿಯನ್ನು ಸ್ವೀಕರಿಸಿ ರಾಜ್ಯಾದ್ಯಂತ ದಸಂಸ ಭೀಮಘರ್ಜನೆ ಬೆಂಬಲ ನೀಡಲಿದೆ. ಎಲ್ಲಾ ತಾಲ್ಲೂಕು ಹಾಗೂ ಜಿಲ್ಲೆಯಲ್ಲಿ ಜೊತೆಗಿರಲಿದೆ ಎಂದರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಭರತ್ ಶೆಟ್ಟಿ, ಕುಂದಾಪುರ ತಾಲೂಕು ಸಂಘದ ಅಧ್ಯಕ್ಷ ಪ್ರಕಾಶ್ ರಾಥೋಡ್, ಉಪಾಧ್ಯಕ್ಷ ಆನಂದ ಕುಮಾರ್, ಕಾರ್ಯದರ್ಶಿ ವಿಶ್ವನಾಥ, ಖಜಾಂಚಿ ವಿಘ್ನೇಶ್, ರಾಜ್ಯ ಸಂಘ ಮಾಧ್ಯಮ ವಕ್ತಾರ ಆನಂದ್ ಮುಕ್ಕಣ್ಣ, ಜಿಲ್ಲಾ ಉಪಾಧ್ಯಕ್ಷ ಶಿವರಾಯ್, ಮಹಿಳಾ ಉಪಾಧ್ಯಕ್ಷೆ ದೀಪಿಕಾ ಶೆಟ್ಟಿ ಮೊದಲಾವರು ಧರಣಿಯಲ್ಲಿ ಪಾಲ್ಗೊಂಡರು.
ಉಡುಪಿಯಲ್ಲೂ ಧರಣಿ:ರಾಜ್ಯಾದ್ಯಂತ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಯ ಈ ಧರಣಿ ಸತ್ಯಾಗ್ರಹ ಉಡುಪಿ ಸೇರಿದಂತೆ ಜಿಲ್ಲೆಯ ಎಲ್ಲಾ ಏಳು ತಾಲೂಕುಗಳ ತಾಲೂಕು ಕಚೇರಿ ಎದುರು ಇಂದೂ ಮುಂದುವರಿಯಿತು. ಜಿಲ್ಲೆಯ ಎಲ್ಲಾ 165 ಮಂದಿ ಗ್ರಾಮ ಆಡಳಿತ ಅಧಿಕಾರಿಗಳು ಇದರಲ್ಲಿ ಪಾಲ್ಗೊಂಡಿದ್ದರು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಎಸ್. ತಿಳಿಸಿದ್ದಾರೆ.
ಧರಣಿ ಆರನೇ ದಿನವಾದ ನಾಳೆಯೂ ಮುಂದುವರಿಯಲಿದೆ. ಧರಣಿಯ ಮುಂದಿನ ಸ್ವರೂಪದ ಬಗ್ಗೆ ರವಿವಾರ ರಾಜ್ಯಮಟ್ಟದಲ್ಲಿ ತೀರ್ಮಾನವಾಗಲಿದೆ ಎಂದು ಪ್ರಮೋದ್ ತಿಳಿಸಿದರು.







