ಕರಾವಳಿಗೆ ನಾಲ್ಕು ದಿನ ಎಲ್ಲೋ ಅಲರ್ಟ್: ಹೆಬ್ರಿ ಚಾರದಲ್ಲಿ ಗಾಳಿಗೆ 6 ಮನೆಗಳಿಗೆ ಹಾನಿ

ಉಡುಪಿ: ಕೆಲವು ದಿನಗಳ ವಿರಾಮದ ಬಳಿಕ ನಿನ್ನೆಯಿಂದ ಬಿರುಸು ಪಡೆದಿರುವ ಮುಂಗಾರು ಮಳೆ ಇಂದು ಸಹ ಮುಂದುವರಿದಿದೆ. ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್‌ನ್ನು ಹವಾಮಾನ ಇಲಾಖೆ ಘೋಷಿಸಿದ್ದು ಭಾರೀ ಮಳೆಯ ಮುನ್ಸೂಚನೆ ನೀಡಿದೆ.
ಗಂಟೆಗೆ 30ರಿಂದ 40ಕಿ.ಮೀ. ವೇಗದ ಗಾಳಿಯೊಂದಿಗೆ ಗುಡುಗು- ಮಿಂಚು ಸಹ ಇರುವ ನಿರೀಕ್ಷೆ ಇದ್ದು, ಸರ್ವಸನ್ನದ್ಧರಾಗಿರುವ ಇಲಾಖೆ ಸೂಚನೆ ನೀಡಿದೆ. ಕರಾವಳಿಯ ಒಂದೆರಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 49.2 ಮಿ.ಮೀ.ಮಳೆಯಾಗಿದೆ. ಬೈಂದೂರು ಮತ್ತು ಹೆಬ್ರಿಗಳಲ್ಲಿ ಅತ್ಯಧಿಕ 64ಮಿ.ಮೀ. ಮಳೆ ಸುರಿದಿದೆ.
ಹೆಬ್ರಿ ತಾಲೂಕಿನ ಚಾರ ಗ್ರಾಮದ ಸುತ್ತಮುತ್ತ ನಿನ್ನೆ ಸಂಜೆ ಬೀಸಿದ ಬಿರುಗಾಳಿಗೆ ಆರು ಮನೆಗಳಿಗೆ ಭಾಗಶ: ಹಾನಿಯಾಗಿದ್ದು, ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಚಾರ ಗ್ರಾಮದ ಬಸವ ಪರವ, ಪೊನ್ನುಸ್ವಾಮಿ, ನಿತ್ಯಾನಂದ, ವಸಂತ ಪರವ, ಪಾರ್ಥಸಾರಥಿ ಹಾಗೂ ಸಾಧು ಶೆಟ್ಟಿ ಎಂಬವರ ಮನೆಗಳಿಗೆ ಗಾಳಿ-ಮಳೆಯಿಂದ ಹಾನಿ ಸಂಭವಿಸಿರುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ಬಂದಿದೆ.







