ಉಡುಪಿ ಜಿಲ್ಲೆಯ 6 ಕಡೆ ಸ್ಪೀಡ್ ರಾಡಾರ್ ಕ್ಯಾಮರಾ ಕಾರ್ಯಾರಂಭ

ಉಡುಪಿ, ಮೇ 21:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಉಡುಪಿ ಜಿಲ್ಲೆಯಾದ್ಯಂತ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರು ಕಡೆಗಳಲ್ಲಿ ಅಳವಡಿಸಿರುವ ಅತ್ಯಾಧುನಿಕ ಸ್ಪೀಡ್ ರಾಡಾರ್ ಕ್ಯಾಮರಾಗಳನ್ನು ಅಳವಡಿಸಿದ್ದು, ಅವುಗಳು ಕಾರ್ಯಾರಂಭ ಮಾಡಿವೆ ಎಂದು ಇಲಾಖೆ ಪ್ರಕಟಣೆಯ ಮೂಲಕ ತಿಳಿಸಿದೆ.
ಇವುಗಳ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನಗಳನ್ನು ಜಿಲ್ಲಾ ನಿಯಂತ್ರಣ ಕೊಠಡಿಗಳಲ್ಲಿ ಮಾನಿಟರ್ ಮಾಡಿ ನಿಯಮ ಉಲ್ಲಂಘನೆ ಗಳಿಗೆ ಸಂಬಂಧಿಸಿದ ಚಲನ್‌ಗಳನ್ನು ಪೋಸ್ಟ್ ಮೂಲಕ ಕಳುಹಿಸಲಾಗು ತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಸದ್ಯ ಆರು ಕಡೆಗಳಲ್ಲಿ ಸ್ಪೀಡ್ ರಾಡಾರ್ ಕ್ಯಾಮರಾಗಳನ್ನು ಅಳವಡಿಸಲಾ ಗಿದೆ. ಇನ್ನೂ 14 ಸ್ಥಳಗಳನ್ನು ಇದಕ್ಕಾಗಿ ಗುರುತಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರದಲ್ಲೇ ವರ್ಕ್ ಆರ್ಡರ್ ನೀಡಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಸದ್ಯ ಕಾರ್ಕಳದ ದೂಪದಕಟ್ಟೆ (ವೇಗದ ಮಿತಿ ಗಂಟೆಗೆ 60ಕಿ.ಮೀ.), ಪಡುಬಿದ್ರೆಯ ಉಚ್ಚಿಲ (80ಕಿ.ಮೀ.), ಕಾಪು ವಿನ ದಂಡತೀರ್ಥ ಶಾಲೆ ಬಳಿ (80ಕಿ.ಮೀ.), ಕೋಟದ ತೆಕ್ಕಟ್ಟೆ (80ಕಿ.ಮೀ.), ಗಂಗೊಳ್ಳಿಯ ತ್ರಾಸಿ (80ಕಿ.ಮೀ.) ಹಾಗೂ ಬೈಂದೂರಿನ ನಾಯಕನಕಟ್ಟೆ (ವೇಗದ ಮಿತಿ ಗಂಟೆಗೆ 80ಕಿ.ಮೀ.)ಗಳಲ್ಲಿ ಇವುಗಳನ್ನು ಅಳವಡಿಸಲಾಗಿದೆ ಎಂದರು.
ವೇಗದ ಮಿತಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಯಮ ಹಾಗೂ ಹೆದ್ದಾರಿ ನಿಯಮಗಳ ಅನ್ವಯ ಅಳವಡಿಕೆ ಮಾಡಲಾಗಿದೆ ಎಂದೂ ಎಸ್ಪಿ ಅವರು ಸ್ಪಷ್ಟನೆ ನೀಡಿದ್ದಾರೆ.
ಸ್ಪೀಡ್ ರಾಡಾರ್ ಪತ್ತೆ ಮಾಡುವ ಸಂಚಾರ ಉಲ್ಲಂಘನೆಗಳಲ್ಲಿ ಅತಿವೇಗದ ಚಾಲನೆ, ಟ್ರಿಪಲ್ ರೈಡಿಂಗ್, ಸೀಟ್ ಬೆಲ್ಡ್ ಉಲ್ಲಂಘನೆ, ಹೆಲ್ಮೆಟ್ ಉಲ್ಲಂಘನೆ, ಮೊಬೈಲ್ ಬಳಸಿ ಚಾಲನೆ, ತಪ್ಪು ದಿಕ್ಕಿನಲ್ಲಿ ಚಾಲನೆ ಹಾಗೂ ಇತರೆ ಸಂಚಾರ ನಿಯಮಗಳ ಉಲ್ಲಂಘನೆಗಳು ಸೇರಿವೆ.
ಸಂಚಾರ ನಿಯಮಗಳ ಉಲ್ಲಂಘನೆಯನ್ನು ಜಿಲ್ಲಾ ನಿಯಂತ್ರಣ ಕೊಠಡಿಯಿಂದ ಮಾನಿಟರಿಂಗ್ ಮಾಡಲಾಗುತ್ತದೆ. ದಂಡದ ಚಲನ್‌ಗಳನ್ನು ಅಂಚೆ ಮೂಲಕ ರವಾನಿಸಲಾಗುತ್ತದೆ. ಚಲನ್ ಸ್ವೀಕರಿಸಿದ ಏಳು ದಿನಗಳ ಒಳಗೆ ಉಡುಪಿ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಗೆ ಬಂದು ದಂಡದ ಮೊತ್ತವನ್ನು ಪಾವತಿಸಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.






