ಕುಂದಾಪುರ ಪೊಲೀಸರ ವಿಶೇಷ ಕಾರ್ಯಾಚರಣೆ: ಕರ್ಕಶ ಸೈಲೆನ್ಸರ್ ಹೊಂದಿದ್ದ 6-7 ಬೈಕ್‌ಗಳು ವಶ

ಕುಂದಾಪುರ, ಮೇ 23: ಕರ್ಕಶ ಸೈಲೆನ್ಸರ್ ಹೊಂದಿದ್ದ ಬೈಕ್‌ಗಳನ್ನು ಕುಂದಾಪುರ ಸಂಚಾರ ಠಾಣೆಯ ಪೊಲೀಸರು ಎರಡು ದಿನಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ದ್ವಿಚಕ್ರ ವಾಹನಗಳಲ್ಲಿ ಆಯಾ ಸಂಸ್ಥೆ ಅಳವಡಿಸಿದ ಸೈಲೆನ್ಸರ್(ಡೆಸಿಬಲ್ ಕಿಲ್ಲರ್) ಮಾರ್ಪಾಡುಗೊಳಿಸಿ ಕುಂದಾಪುರ ನಗರದೊಳಗಿನ ಕಾಲೇಜು, ಆಸ್ಪತ್ರೆ ಆವರಣ, ವಿದ್ಯಾರ್ಥಿಗಳ ಹಾಸ್ಟೆಲ್ ಸಹಿತ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಕರ್ಕಶ ಶಬ್ದದೊಂದಿಗೆ ವೇಗದ ಚಾಲನೆ, ಸಂಚಾರಿ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿತ್ತು.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ನಿರ್ದೇಶನದಲ್ಲಿ ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ನಗರ ಠಾಣೆ ಪೊಲೀಸ್ ನಿರೀಕ್ಷಕ ಜಯರಾಮ ಗೌಡ ಮಾರ್ಗದರ್ಶನದಲ್ಲಿ ಕುಂದಾಪುರ ಟ್ರಾಫಿಕ್ ಠಾಣೆ ಎಸ್ಸೈಗಳಾದ ಅನೂಪ್ ನಾಯಕ್, ಸುಧಾ ಪ್ರಭು ಹಾಗೂ ಸಿಬ್ಬಂದಿ ತಂಡ ಸಂಚಾರ ಠಾಣಾ ವ್ಯಾಪ್ತಿಯ ವಿವಿಧೆೆಡೆ ಕಾರ್ಯಾಚರಣೆ ನಡೆಸಿ 6-7 ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ಸಂಚಾರ ನಿಯಮ ಪಾಲನೆ ಅಗತ್ಯವಾಗಿದೆ. ಈ ಉದ್ದೇಶದಿಂದ ದ್ವಿಚಕ್ರ, ಘನ ಹಾಗೂ ಲಘು ವಾಹನಗಳ ಮೇಲೆ ನಿಗಾವಹಿಸಲಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಅತೀ ವೇಗ, ನಿರ್ಲಕ್ಷ್ಯತನ ವಹಿಸುವ ವಾಹನ ಸವಾರರ ಪತ್ತೆ ಮಾಡಿ ಕಾನೂನು ಚೌಕಟ್ಟಿನಲ್ಲಿ ಕ್ರಮಜರುಗಿಸುವ ಕಾರ್ಯಾಚರಣೆ ಮುಂದುವರೆ ಯಲಿದ್ದು ಪ್ರಸ್ತುತ ವಶಪಡಿಸಿಕೊಂಡ ಬೈಕ್‌ಗಳಿಗೆ ಸಂಬಂಧಿತ ದಾಖಲೆಗಳು ಹಾಗೂ ಸವಾರರ ಚಾಲನ ಪರವಾ ನಿಗೆ ಸಹಿತ ಲೋಪದೋಷಗಳನ್ನಾಧರಿಸಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಕುಂದಾಪುರ ಸಂಚಾರ ಠಾಣೆ ಪೊಲೀಸ್ ಉಪನಿರೀಕ್ಷಕ ಅನುಪ್ ನಾಯಕ್ ತಿಳಿಸಿದ್ದಾರೆ.






