ನ. 6,7: ನಿಟ್ಟೆ ವಿವಿಯ 16ನೇ ವಾರ್ಷಿಕ ಘಟಿಕೋತ್ಸವ

ಉಡುಪಿ, ನ.4: ನಿಟ್ಟೆ ಪರಿಗಣಿತ (ಡೀಮ್ಡ್) ವಿಶ್ವವಿದ್ಯಾಲಯದ 16ನೇ ವಾರ್ಷಿಕ ಘಟಿಕೋತ್ಸವ ಇದೇ ನ.6 ಮತ್ತು 7ರಂದು ಮೂರು ಹಂತಗಳಲ್ಲಿ ಮಂಗಳೂರು ಮತ್ತು ನಿಟ್ಟೆ ಕ್ಯಾಂಪಸ್‌ಗಳಲ್ಲಿ ನಡೆಯಲಿದ್ದು, ಇವುಗಳಲ್ಲಿ ಒಟ್ಟು 3,325 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದೆ ಎಂದು ನಿಟ್ಟೆ ವಿವಿಯ ಕುಲಪತಿ ಪ್ರೊ. ಡಾ.ಎಂ.ಎಸ್. ಮೂಡಿತ್ತಾಯ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಡಾ.ಮೂಡಿತ್ತಾಯ, ಈ ಬಾರಿ ಒಟ್ಟಾರೆಯಾಗಿ 57 ಚಿನ್ನದ ಪದಕ ಹಾಗೂ 159 ಪ್ರಶಂಸಾ ಪತ್ರಗಳ ವಿತರಣೆಯೂ ನಡೆಯಲಿದೆ. ಇವುಗಳಲ್ಲಿ ನಿಟ್ಟೆ ವಿವಿ 39 ಚಿನ್ನದ ಪದಕ ನೀಡಿದರೆ, 18 ದತ್ತಿ ಚಿನ್ನದ ಪದಕಗಳೂ ವಿತರಣೆಯಾಗಲಿವೆ ಎಂದು ವಿವರಿಸಿದರು.
ನ.6ರಂದು ಮಂಗಳೂರಿನ ದೇರಳಕಟ್ಟೆಯ ವಿವಿ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ 1455 ವಿದ್ಯಾರ್ಥಿ ಗಳು ಹಾಗೂ ಮರುದಿನ ನಿಟ್ಟೆ ಆಪ್ ಕ್ಯಾಂಪಸ್ ಸೆಂಟರ್‌ನಲ್ಲಿ ಬೆಳಗ್ಗೆ 10 ಹಾಗೂ ಸಂಜೆ 4:00ಗಂಟೆಗೆ ನಡೆಯುವ ಘಟಿಕೋತ್ಸವದಲ್ಲಿ 1870 ಮಂದಿ ಪದವಿ ಸ್ವೀಕರಿಸಲಿದ್ದಾರೆ. ಈ ಹಾರಿ 1,148 ಮಂದಿ ಬಿ.ಟೆಕ್, 347 ಮಂದಿ ವೈದ್ಯಕೀಯ, 220 ಮಂದಿ ಫಾರ್ಮಸಿ, 181 ಮಂದಿ ಎಂಸಿಎ, 180 ಮಂದಿ ಎಂಬಿಎ ಹಾಗೂ 140 ಮಂದಿ ಬಯೋಲಾಜಿಕಲ್ ಸಾಯನ್ಸ್ ವಿದ್ಯಾರ್ಥಿಗಳೊಂದಿಗೆ ಇತರ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕಾರ್ಯಕ್ರಮಗಳ ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ ಎಂದರು.
ನ.6ರಂದು ಬಬೆಳಗ್ಗೆ 10:00ಗಂಟೆಗೆ ಮಂಗಳೂರಿನ ದೇರಳಕಟ್ಟೆ ವಿವಿ ಮೈದಾನದಲ್ಲಿ ನಡೆಯುವ ಘಟಿಕೋತ್ಸವ ದಲ್ಲಿ ಚಂಡೀಗಢ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ಡಾ. ವಿವೇಕ್‌ಲಾಲ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ನ.7ರಂದು ಬೆಳಗ್ಗೆ 10:00ಗಂಟೆಗೆ ನಿಟ್ಟೆ ಆಫ್ ಕ್ಯಾಂಪಸ್‌ನಲ್ಲಿ ನಿಟ್ಟೆ ಎನ್‌ಎಂಎಎಂ ತಾಂತ್ರಿಕ ಸಂಸ್ಥೆಯ ಇಂಜಿನಿಯರಿಂಗ್ ಪದವಿ ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಬ್ರಹ್ಮೋಸ್ ಕ್ಷಿಪಣಿಯ ಜನಕ, ಬೆಂಗಳೂರಿನ ಎಸ್-ವ್ಯಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಹಾಗೂ ಪರುಣೆಯ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಟೆಕ್ನಾಲಜಿಯ ಮಾಜಿ ಕುಲಪತಿ ಡಾ.ಪ್ರಹ್ಲಾದ್ ರಾಮರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಅದೇ ದಿನ ಸಂಜೆ 4:00ಗಂಟೆಗೆ ನಿಟ್ಟೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಿಎಚ್‌ಡಿ ಸಂಶೋಧಕರು, ಎನ್‌ಎಂಎಎಂಐಟಿ ಮತ್ತು ಜೆಕೆಎಸ್‌ಎಚ್‌ಐಎಂನ ಸ್ನಾತಕೋತ್ತರ ವಿದ್ಯಾರ್ಥಿಗಳು, ಡಾ.ಎನ್.ಎಸ್‌ಎಎಂ ಪ್ರಥಮ ದರ್ಜೆ ಕಾಲೇಜು ಮತ್ತು ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಪ್ರೊಪೆಷನಲ್ ಎಜುಕೇಷನ್‌ನ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದ್ದು, ಕೇಂದ್ರ ಚಲನಚಿತ್ರ ಪ್ರಮಾಣಿಕರ ಮಂಡಳಿಯ ಅಧ್ಯಕ್ಷ ಶಶಿ ಶೇಖರ್ ವೆಂಪತಿ ಮುಖ್ಯ ಅತಿಥಿಗಳಾಗಿರುವರು ಎಂದು ತಿಳಿಸಿದರು.
ಸಮಾರಂಭಗಳ ಅಧ್ಯಕ್ಷತೆಯನ್ನು ನಿಟ್ಟೆ ಡೀಮ್ಡ್ ವಿವಿಯ ಕುಲಾಧಿಪತಿ ವಿಶಾಲ್ ಹೆಗ್ಡೆ ವಹಿಸಲಿದ್ದಾರೆ. ಸಹ-ಕುಲಾಧಿಪತಿ ಪ್ರೊ.ಡಾ.ಎಂ. ಶಾಂತರಾಮ್ ಶೆಟ್ಟಿ ಮತ್ತು ಕುಲಪತಿ ಡಾ.ಮೂಡಿತ್ತಾಯರೊಂದಿಗೆ ಕುಲಸಚಿವರು, ವಿವಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ವಿವಿಯ ರಿಜಿಸ್ಟ್ರಾರ್ ಡಾ.ಹರ್ಷ ಹಾಲಹಳ್ಳಿ, ಪರೀಕ್ಷಾ ನಿಯಂತ್ರಕ ಡಾ.ಪ್ರಸಾದ್ ಶೆಟ್ಟಿ, ಡಾ.ಸುಬ್ರಹ್ಮಣ್ಯ ಭಟ್ ಕೆ., ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣಕರ್, ಡೀನ್‌ಗಳಾದ ಡಾ.ಸುಧೀರ್ ಎಂ. ಮತ್ತು ಡಾ.ವೀಣಾ ಕುಮಾರಿ ಹಾಗೂ ಪಿಆರ್‌ಒ ಕೃಷ್ಣರಾಜ್ ಜೋಯಿಸ್ ಉಪಸ್ಥಿತರಿದ್ದರು.






