ಉಡುಪಿ: ಫೆ.7ರಿಂದ ಮಹಿಳಾ ಉದ್ದಿಮೆದಾರರ ‘ಪವರ್ ಪರ್ಬ’

ಉಡುಪಿ: ಉಡುಪಿ ಜಿಲ್ಲೆಯಲ್ಲಿರುವ ಮಹಿಳಾ ಉದ್ದಿಮೆದಾರರ ಸಂಘಟನೆ ‘ಪವರ್’ ವತಿಯಿಂದ ಮಹಿಳಾ ಉದ್ಯಮಿಗಳು ತಯಾರಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ‘ಪವರ್ ಪರ್ಬ’ ಇದೇ ಫೆ.7ರಿಂದ 9ರವರೆಗೆ ಉಡುಪಿ ಮಿಷನ್ ಕಾಂಪೌಂಡ್‌ನ ಕ್ರಿಶ್ಚಿಯನ್ ಪಿ.ಯು.ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ತನುಜಾ ಮಾಬೆನ್ ತಿಳಿಸಿದ್ದಾರೆ.
ಉಡುಪಿಯ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪವರ್ ಸಂಸ್ಥೆ ಮಹಿಳಾ ಉದ್ಯಮಿ ಗಳಿಗೆ ಮಾರುಕಟ್ಟೆ ಒದಗಿಸಲು, ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಹಿಳಾ ಉದ್ಯಮಿಗಳು ತಯಾರಿಸಿದ ವಿವಿಧ ವಸ್ತು, ಉತ್ಪನ್ನಗಳನ್ನು ಜನರೆದುರು ತೆರೆದಿಡಲು ಹಾಗೂ ಅವರ ಸಂಸ್ಥೆಯ ಸೇವೆ, ಕೌಶಲ್ಯ, ಪಾಂಡಿತ್ಯವನ್ನು ಗ್ರಾಹಕರೆದುರು ಪ್ರದರ್ಶಿಸಲು ಪವರ್ ಪರ್ಬವನ್ನು ಆಯೋಜಿಸಲಾಗುತ್ತಿದೆ ಎಂದರು.
ಇದೀಗ ಐದನೇ ಬಾರಿಗೆ ಆಯೋಜಿಸುತ್ತಿರುವ ಮೂರು ದಿನಗಳ ಪವರ್ ಪರ್ಬದಲ್ಲಿ ಭಾಗವಹಿಸಲು ಜಿಲ್ಲೆ, ಹೊರಜಿಲ್ಲೆ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಒಟ್ಟು ಸುಮಾರು 150 ಮಂದಿ ಮಹಿಳಾ ಉದ್ಯಮಿಗಳು ಹೆಸರು ನೊಂದಾಯಿ ಸಿಕೊಂಡಿದ್ದಾರೆ. 150ರಷ್ಟು ಮಳಿಗೆಗಳು ಇರಲಿವೆ. ಇವುಗಳಲ್ಲಿ 60 ಮಳಿಗೆಗಳು ಕೇಂದ್ರ ಸರಕಾರದ ಎಂಎಸ್‌ಎಂಇ ಪಿಎಂಎಸ್ ಯೋಜನೆ ವತಿಯಿಂದ ನೊಂದಾಯಿತಗೊಂಡಿವೆ.ವಿಕಲಚೇತನ ಕಲ್ಯಾಣ ಇಲಾಖೆಯ ಐದು ಶಾಲೆಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಪವರ್ ಪರ್ಬವನ್ನು ಫೆ.7ರ ಶುಕ್ರವಾರ ಸಂಜೆ 4.30ಕ್ಕೆ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ದೀಪಬೆಳಗಿಸಿ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಎಂಎಸ್‌ಎಂಇ ಜಂಟಿ ನಿರ್ದೇಶಕ ಡಾ.ಕೆ.ಸಾಕ್ರೋಟಿಸ್ ಸ್ಟಾಲ್‌ಗಳನ್ನು ಉದ್ಘಾಟಿಸಲಿದ್ದಾರೆ. ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿರುವರು.
ಎರಡನೇ ದಿನದಂದು ಸಂಜೆ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್. ಎಸ್. ಬಲ್ಲಾಳ್ ಅಧ್ಯಕ್ಷತೆಯಲ್ಲಿ ೭ ಮಂದಿ ಮಹಿಳಾ ಸಾಧಕಿಯರು, ಉದ್ಯಮಿಗಳಿಗೆ ‘ಪವರ್ ಸ್ಟಾರ್’ ಬಿರುದಿನೊಂದಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಫೆ.೯ರಂದು ಸಂಜೆ ೪:೩೦ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬೆಂಗಳೂರು ಡಿಐಸಿ ನಿರ್ದೇಶಕ ನಿತೇಶ್ ಪಾಟೀಲ್ ಮುಖ್ಯ ಅತಿಥಿಯಾಗಿರುವರು.
ಇದರೊಂದಿಗೆ ಪವರ್ ಸದಸ್ಯರಿಂದ ಫ್ಯಾಶನ್ ಶೋ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಮುಖವಾಡ ತಯಾರಿಕೆ ಸ್ಪರ್ಧೆ, ಮಹಿಳೆಯರಿಗೆ ಅಗ್ನಿಹರಿತ ಅಡುಗೆ ತಯಾರಿಕೆ, ರೀಲ್ಸ್, ಯುವಜನತೆಗಾಗಿ ಮ್ಯೂಸಿಕಲ್ ಬ್ಯಾಂಡ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಪವರ್ ಪರ್ಬದ ಸಂಯೋಜಕಿ ಸುಗುಣಾ ಸುವರ್ಣ ತಿಳಿಸಿದರು.ಇದರೊಂದಿಗೆ ಪ್ರತಿದಿನ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಪವರ್ ಪರ್ಬಕ್ಕೆ ಪೂರ್ವಭಾವಿಯಾಗಿ ಬುಧವಾರ ಫೆ.೫ರಂದು ಮಣಿಪಾಲದ ರಜತಾದ್ರಿಯಿಂದ ಉಡುಪಿಯವರೆಗೆ ಕಾರ್ ಹಾಗೂ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿದ್ದು, ಇದರಲ್ಲಿ ಪವರ್ ಸಂಸ್ಥೆಯ ಸದಸ್ಯರು ಹಾಗೂ ಪ್ರದರ್ಶಕರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಂಯೋಜಕಿ ಸುಗುಣಾ ಸುವರ್ಣ, ಕಾರ್ಯದರ್ಶಿ ಪ್ರಿಯಾ ಕಾಮತ್, ಪುಷ್ಪಾ ಜಿ.ರಾವ್, ಸುಪ್ರಿಯಾ ಕಾಮತ್ ಉಪಸ್ಥಿತರಿದ್ದರು.







