ಮುಂದುವರಿದ ಮಳೆ; ಉಡುಪಿ ಜಿಲ್ಲೆಯಲ್ಲಿ 7 ಮನೆಗಳಿಗೆ ಹಾನಿ

ಉಡುಪಿ, ಜು.5: ಜಿಲ್ಲೆಯಲ್ಲಿ ಇಂದೂ ಸಹ ಮಳೆಯ ಬಿರುಸು ಹಾಗೆಯೇ ಮುಂದುವರಿದಿದೆ. ಇದರಿಂದ ಜಿಲ್ಲೆಯ ವಿವಿದೆಡೆಗಳಲ್ಲಿ 7 ಮನೆಗಳಿಗೆ ಹಾನಿಯಾಗಿರುವ ವರದಿ ಬಂದಿದ್ದು, 3.25 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಲಿಯೊ ಸಲ್ಡಾನ ಇವರ ಮನೆ ಮೇಲೆ ಮರ ಬಿದ್ದು 40,000ರೂ. ನಷ್ಟ ಉಂಟಾಗಿದೆ. ಬಾರೀ ಗಾಳಿಯಿಂದ ಬೈಂದೂರು ತಾಲೂಕಿನಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದೆ.
ಯಳಜಿತ್ ಗ್ರಾಮದ ಶ್ರೀನಿವಾಸ ಮಯ್ಯ ಎಂಬವರ ಮನೆ ಮೇಲೆ ಮರ ಬಿದ್ದು ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ. ಪಡುವರಿ ಗ್ರಾಮದ ರಾಮಯ್ಯ ಎಂಬವರ ಮನೆಗೆ 15 ಸಾವಿರ ರೂ., ಕಾಲ್ತೋಡು ಗ್ರಾಮದ ಜಗನ್ನಾಥ ಹಾಗೂ ಶಿವರಾಮ ಶೆಟ್ಟಿ ಎಂಬವರ ಮನೆಗೆ ತಲಾ 50,000ರೂ. ನಷ್ಟದ ಅಂದಾಜು ಮಾಡಲಾಗಿದೆ.
ಕಾಪು ತಾಲೂಕಿನಲ್ಲಿ ಕಳತ್ತೂರು ಗ್ರಾಮದ ಪ್ರಮೋದ ಶೆಟ್ಟಿ ಎಂಬವರ ಮನೆ ಮೇಲೆ ಮರಬಿದ್ದು 20ಸಾವಿರ ರೂ. ಹಾಗೂ ನಂದಿಕೂರು ಗ್ರಾಮದ ಲೀಲಾ ಎಂಬವರ ಮನೆ, ಭಾರೀ ಮಳೆಗೆ ಭಾಗಶ: ಕುಸಿದು 50ಸಾವಿರ ರೂ. ನಷ್ಟ ಉಂಟಾಗಿದೆ.
ಕರಾವಳಿ ಜಿಲ್ಲೆಗಳಿಗೆ ಮುಂದಿನ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್‌ನ್ನು ಘೋಷಿಸಿದ್ದರೂ, ನಾಳೆಗೆ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರೊಂದಿಗೆ ನಾಳೆ ಗಾಳಿಯೂ ಜೋರಾಗಿ ಬೀಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.