ಉಡುಪಿ: ಜೂ.7ರಂದು ಮಾನ್ಸೂನ್ ಕ್ರಾಸ್‌ಕಂಟ್ರಿ ರೇಸ್; ಮಕ್ಕಳ ಅಥ್ಲೆಟಿಕ್ ಮೀಟ್

ಉಡುಪಿ, ಜೂ.3: ಚಾಲೆಂಜರ್ಸ್ ಅಥ್ಲೆಟಿಕ್ ಕ್ಲಬ್ ಉಡುಪಿ ಇವರ ಆಶ್ರಯದಲ್ಲಿ ಸಿಟಿ ಎಜುಕೇಷನ್ ಟ್ರಸ್ಟ್ ಉಡುಪಿ, ವಿದ್ಯಾರತ್ನ ಕಾಲೇಜ್ ಆಫ್ ನರ್ಸಿಂಗ್ ಉಡುಪಿ, ಪೊದಾರ್ ಇಂಟರ್ನ್ಯಾಷನಲ್ ಸ್ಕೂಲ್ ಉಡುಪಿ ಹಾಗೂ ಉಡುಪಿ ರನ್ನರ್ಸ್ ಕ್ಲಬ್ ಇವರ ಸಹಯೋಗದೊಂದಿಗೆ ಜೂನ್ 7ರ ರವಿವಾರ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮಾನ್ಸೂನ್ ಕ್ರಾಸ್ ಕಂಟ್ರಿ ಸ್ಪರ್ಧೆ ಹಾಗೂ ಮಕ್ಕಳ ಅಥ್ಲೆಟಿಕ್ ಮೀಟ್‌ನ್ನು ಆಯೋಜಿಸಲಾಗಿದೆ ಎಂದು ಕ್ರೀಡಾಕೂಟದ ತಾಂತ್ರಿಕ ನಿರ್ದೇಶಕ ರಾಮಚಂದ್ರ ಪಾಟ್ಕರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು ಮಾನ್ಸೂನ್ ಕ್ರಾಸ್ ಕಂಟ್ರಿ ಸ್ಪರ್ಧೆ 12 ವರ್ಷದೊಳಗಿನ ಮಕ್ಕಳಿಗೆ (1ಕಿ.ಮೀ.), 16 ವರ್ಷದೊಳಗಿನ ಮಕ್ಕಳಿಗೆ (ಬಾಲಕರಿಗೆ 3ಕಿ.ಮೀ., ಬಾಲಕಿಯರಿಗೆ 2ಕಿ.ಮೀ.), 16ರಿಂದ 39ವರ್ಷಗಳೊಗಿನ ಯುವಕ, ಯುವತಿಯರಿಗೆ (5ಕಿ.ಮೀ ಮತ್ತು 10ಕಿ.ಮೀ.) ಹಾಗೂ 39 ವರ್ಷ ಮೇಲಿನ ಪುರುಷ ಮತ್ತು ಮಹಿಳೆಯರಿಗೆ (5ಕಿ.ಮೀ, ಮತ್ತು 10ಕಿ.ಮೀ.) ನಡೆಯಲಿದೆ.
ಕ್ರಾಸ್‌ಕಂಟ್ರಿ ಸ್ಪರ್ಧೆ ಮುಂಜಾನೆ 6:45ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭಗೊಂಡು ಅಲ್ಲೇ ಮುಕ್ತಾಯಗೊಳ್ಳಲಿದೆ. ಮೊದಲ ಮೂರು ಸ್ಥಾನ ಪಡೆದವರಿಗೆ ನಗದು ಬಹುಮಾನ ಹಾಗೂ ಪದಕಗಳನ್ನು ನೀಡಲಾಗುತ್ತದೆ ಎಂದರು.
ಮಕ್ಕಳ ಕ್ರೀಡಾಕೂಟ ಬೆಳಗ್ಗೆ 9ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರಲ್ಲಿ 8 ವರ್ಷದೊಳಗಿನ, 10ವರ್ಷದೊಳಗಿನ, 12ವರ್ಷದೊಳಗಿನ, 14 ವರ್ಷದೊಳಗಿನ ಹಾಗೂ 16 ವರ್ಷದೊಳಗಿನ ಮಕ್ಕಳಿಗೆ ಓಟದ ಸ್ಪರ್ಧೆ, ಬ್ರಾಡ್‌ಜಂಪ್, ಲಾಂಗ್‌ಜಂಪ್, ಬಾಲ್ ಎಸೆತ, ಶಾಟ್‌ಪುಟ್ ಹಾಗೂ ರಿಲೇ ಸ್ಪರ್ಧೆಗಳು ನಡೆಯಲಿವೆ. ಮೊದಲ ಮೂರು ಸ್ಥಾನ ಪಡೆವರಿಗೆ ಪದಕ, ಸರ್ಟಿಫಿಕೆಟ್‌ಗಳನ್ನು ನೀಡಲಾಗುತ್ತದೆ ಎಂದರು.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಈಗಾಗಲೇ ಕ್ರಾಸ್‌ಕಂಟ್ರಿ ಸ್ಪರ್ಧೆಗೆ 500 ಮಂದಿ ಹಾಗೂ ಕಿಡ್ಸ್ ಮೀಟ್‌ಗೆ 350 ಮಕ್ಕಳ ಹೆಸರು ನೊಂದಾಯಿಸಿಕೊಂಡಿದ್ದಾರೆ. ಕೂಟದಲ್ಲಿ 1000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಆಸಕ್ತರು ಆನ್‌ಲೈನ್‌ನಲ್ಲಿ ನೋಂದಣಿ ಅಥವಾ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳ ಬಹುದು ಎಂದು ರಾಮಚಂದ್ರ ಪಾಟ್ಕರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಪೊದಾರ್ ಇಂಟರ್‌ನೇಶನಲ್ ಸ್ಕೂಲ್‌ನ ಪ್ರಿನ್ಸಿಪಾಲ್ ನೇತ್ರಾ ಹೆಚ್, ಉಡುಪಿ ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಅಮಿತಾ ಸಿ ರಾವ್, ಉಪಪ್ರಾಂಶುಪಾಲರಾದ ಡಾ.ಎಂ.ಕೆ ರಮೇಶ್, ರನ್ನರ್ ಕ್ಲಬ್‌ನ ಸಂಗಮೇಶ್ವರ್ ಉಪಸ್ಥಿತರಿದ್ದರು.






