ಡುಂಡಿ -70 ಅಭಿನಂದನಾ ಸಮಾರಂಭ-ಪುಸ್ತಕ ಲೋಕಾರ್ಪಣೆ

ಉಡುಪಿ, ಸೆ.9: ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಆಶ್ರಯದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಸಹಯೋಗದೊಂದಿಗೆ ಡುಂಡಿ 70 ಅಭಿನಂದನಾ ಸಮಾರಂಭ ಮತ್ತು ಪುಸ್ತಕ ಲೋಕಾರ್ಪಣೆ ರವಿವಾರ ದೇವಳದ ಭವಾನಿ ಮಂಟಪದಲ್ಲಿ ನಡೆಯಿತು.
ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ ವಿಜಯ ಬಲ್ಲಾಳ್, ಸಾಹಿತಿ ಎಚ್.ಡುಂಡಿರಾಜ್ ಅವರನ್ನು ಗೌರವಿಸಿ ಮಾತ ನಾಡಿ ದುಂಡಿರಾಜ್ ಅವರು ಸಮಾಜದ ಅನೇಕ ಜ್ವಲಂತ ಸಮಸ್ಯೆಗಳನ್ನು ತನ್ನ ಹನಿ ಗವನಗಳ ಮೂಲಕ ಹಾಸ್ಯ ಹಾಸ್ಯ ಭರಿತವಾಗಿ ಪ್ರಸ್ತುತಪಡಿಸಿ ಜನರಿಗೆ ಮನದಟ್ಟು ಮಾಡುವಲ್ಲಿ ಅತ್ಯಂತ ಯಶಸ್ವಿಯಾಗಿದ್ದಾರೆ. ಅವರ ಅನೇಕ ಕವನ ಸಂಕಲನಗಳು ದೇಶವಿದೇಶದಲ್ಲಿ ಮನೆ ಮಾತಾಗಿದೆ ಎಂದರು.
ಅಭಿನಂದನಾ ಮಾತುಗಳನಾಡಿದ ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ್ ಎಕ್ಕಾರ್, ದುಂಡಿರಾಜ್ ಅವರ ಆತ್ಮ ಕಾದಂಬರಿ ಡುಂಡಿಯಾತ್ರೆಯಲ್ಲಿ ಅನೇಕ ರೀತಿಯ ವಿಚಾರಗಳನ್ನು ತಮ್ಮ ಅರ್ಥಪೂರ್ಣವಾದ ಬರವಣಿಗೆಯಲ್ಲಿ ಪ್ರಸ್ತುತಪಡಿಸಿದ್ದಾರೆ. ಅವರು ಕೇವಲ ಕವಿ ಮಾತ್ರವಲ್ಲದೆ ಒಬ್ಬ ಶ್ರೇಷ್ಠ ಮಾನವತಾವಾದಿಯಾ ಗಿದ್ದಾರೆ. ಅವರ ಬದುಕನ್ನು ತಿಳಿಯಬೇಕಾದರೆ ಈ ಪುಸ್ತಕವನ್ನು ಎಲ್ಲರೂ ಓದ ಬೇಕಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಡುಂಡಿಯಾತ್ರೆ ಆತ್ಮ ಕಾದಂಬರಿ ಮತ್ತು ಫೇಸ್‌ಬುಕ್‌ನಲ್ಲಿ ಸಾಕ್ಷಾತ್ಕಾರ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಕೃತಿಗಳನ್ನು ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಪರಿಚಯಿಸಿದರು. ಅಧ್ಯಕ್ಷತೆಯನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್ ವಹಿಸಿದ್ದರು.
ವೇದಿಕೆಯಲ್ಲಿ ವಿಶ್ವಭಾರತಿ ಕರ್ನಾಟಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಸೂರಲು ನಾರಾಯಣ ಮಡಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ಪ್ರಸ್ತಾವನೆಗೈದರು. ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.






