ವಿಮಾ ನೌಕರರ ಸಂಘದ 75ನೇ ವರ್ಷಾಚರಣೆ: ರಕ್ತದಾನ ಶಿಬಿರ

ಉಡುಪಿ, ಆ.30: ಅಖಿಲ ಭಾರತ ವಿಮಾ ನೌಕರರ ಸಂಘದ 75ನೇ ವರ್ಷಾಚರಣೆಯ ಅಂಗವಾಗಿ ವಿಮಾ ನೌಕರರ ಸಂಘ, ಉಡುಪಿ ವಿಭಾಗವು ರಕ್ತನಿಧಿ, ಜಿಲ್ಲಾ ಆಸ್ಪತ್ರೆ, ಉಡುಪಿ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆ.28ರಂದು ಅಜ್ಜರಕಾಡು ಜಿಲ್ಲಾಸ್ಪತ್ರೆಯ ರಕ್ತನಿಧಿಯಲ್ಲಿ ಆಯೋಜಿಸಲಾಗಿತ್ತು.
ಪ್ರಾಸಾತಿವಿಕವಾಗಿ ಮಾತನಾಡಿದ ವಿಮಾ ನೌಕರರ ಸಂಘ, ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವನಾಥ ಮಾತನಾಡಿ, ವಿಮಾ ನೌಕರರ ಸೇವಾ ಸವಲತ್ತು ಮತ್ತು ಸೇವಾ ಪರಿಸ್ಥಿತಿಗಳ ಸುಧಾರಣೆ ಬೇಡಿಕೆಯ ಜೊತೆ ವಿಮಾ ರಾಷ್ಟ್ರೀಕರಣದ ಬೇಡಿಕೆಯೊಂದಿಗೆ 1951ರ ಜುಲೈ 1ರಂದು ಅಖಿಲ ಭಾರತ ವಿಮಾ ನೌಕರರ ಸಂವು ಸ್ಥಾಪನೆಯಾಯಿತು ಮತ್ತು ಕಳೆದ 74 ವರ್ಷಗಳಲ್ಲಿ ತನ್ನ ದ್ಯೇಯೋದ್ಧೇಶಗಳನ್ನು ಈಡೇರಿಸಿಕೊಳ್ಳುವುದರ ಜೊತೆಗೆ ವಿಮಾ ನೌಕರರಲ್ಲಿ ಸಮಾನತೆ ಮತ್ತು ಸೌಹಾರ್ದತೆಯನ್ನು ಬೆಳೆಸಿದೆ ಎಂದರು.
ಭಾರತೀಯ ಜೀವ ವಿಮಾ ನಿಗಮ, ಉಡುಪಿ ವಿಭಾಗದ ಔದ್ಯೋಗಿಕ ಮತ್ತು ಮಾನವ ಸಂಬಂಧ ಪ್ರಬಂಧಕ ಎಂ.ಲಕ್ಷ್ಮೀನಾರಾಯಣ ಶುಭ ಹಾರೈಸಿದರು. ರಕ್ತನಿಧಿಯ ಮುಖ್ಯಸ್ಥೆ ಡಾ.ವೀಣಾ ಕುಮಾರಿ ಎಂ. ರಕ್ತದಾನದ ಮಹತ್ವ ಮತ್ತು ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ವಿಮಾ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂದರ್, ಭಾರತೀಯ ಜೀವ ವಿಮಾ ನಿಗಮ, ಉಡುಪಿ ವಿಭಾಗದ ಕಾನೂನು ಮತ್ತು ಗೃಹ ಸಾಲದ ಪ್ರಬಂಧಕ ಅನ್ವರ್ ಸಾದತ್ ಉಪಸ್ಥಿತರಿದ್ದರು. ಈ ಶಿಬಿರದಲ್ಲಿ 26 ಜನ ರಕ್ತದಾನ ಮಾಡಿದರು.





