ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.76.40 ಮತದಾನ
ಉಡುಪಿ: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆದಿದ್ದು, ಕ್ಷೇತ್ರದಲ್ಲಿ ಒಟ್ಟಾರೆಯಾಗಿ ಶೇ.76.40 ಮಂದಿ ಮತ ಚಲಾಯಿಸಿದ್ದಾರೆ ಎಂದು ಇಲ್ಲಿಗೆ ಬಂದ ಪ್ರಾಥಮಿಕ ವರದಿಗಳು ತಿಳಿಸಿವೆ.
ಬೈಂದೂರು ಕ್ಷೇತ್ರದಲ್ಲಿ ಬೈಂದೂರು ತಾಲೂಕಿನ 26 ಮತ್ತು ಕುಂದಾಪುರ ತಾಲೂಕಿನ 39 ಸೇರಿದಂತೆ ಒಟ್ಟು 65 ಗ್ರಾಮಗಳಲ್ಲಿರುವ 246 ಮತಗಟ್ಟೆ ಗಳಲ್ಲಿ 1,17,711 ಮಂದಿ ಪುರುಷ ಮತದಾರರ ಪೈಕಿ 85,381 ಮಂದಿ ಹಾಗೂ 1,22,786 ಮಹಿಳಾ ಮತದಾರರ ಪೈಕಿ 98,349 ಮಂದಿ ತಮ್ಮ ಮತ ಚಲಾಯಿಸಿದ್ದಾರೆ. ಅಲ್ಲದೇ ಮತದಾರರ ಪಟ್ಟಿಯಲ್ಲಿದ್ದ ಮೂವರು ತೃತೀಯ ಲಿಂಗಿಗಳು ತಮ್ಮ ಮತ ಹಾಕಿದ್ದಾರೆ. ಒಟ್ಟಾರೆಯಾಗಿ ಕ್ಷೇತ್ರದ ಒಟ್ಟು 2,40,500 ಮಂದಿ ಮತದಾರರ ಪೈಕಿ 1,83,733 ಮಂದಿ ಮತದಾರರು ತಮ್ಮ ಸಾಂವಿಧಾನಿಕ ಹಕ್ಕು ಚಲಾಯಿಸಿದ್ದಾರೆ ಎಂದು ವರದಿ ತಿಳಿಸಿದೆ.
ಶೇ.72.53ರಷ್ಟು ಪುರುಷ ಮತದಾರರು ಹಾಗೂ ಶೇ.80.10ರಷ್ಟು ಮಹಿಳಾ ಮತದಾರರು ತಮ್ಮ ಮತವನ್ನು ನೆಚ್ಚಿನ ಅಭ್ಯರ್ಥಿಗಳಿಗೆ ಚಲಾಯಿಸಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಹಳ್ಳಿಹೊಳೆ ಶಾಲೆಯ ಮತಗಟ್ಟೆಯಲ್ಲಿ ಅತ್ಯಧಿಕ ಶೇ.88ರಷ್ಟು ಮತದಾನವಾದರೆ, ಶಿರೂರು ಮೇಲ್ಪೇಟೆ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಕನಿಷ್ಠ ಶೇ.60ರಷ್ಟು ಮತದಾನ ವಾದ ಬಗ್ಗೆ ವರದಿ ತಿಳಿಸಿದೆ.
2019ರಲ್ಲಿ ನಡೆದ ಶಿವಮೊಗ್ಗ ಕ್ಷೇತ್ರದ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಶೇ.75.26ರಷ್ಟು, 2104ರ ಲೋಕಸಭಾ ಚುನಾವಣೆಯಲ್ಲಿ ಶೇ.72.92ರಷ್ಟು ಮತ್ತು 2023ರ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಶೇ.77.86 ರಷ್ಟು ಮತದಾನವಾಗಿತ್ತು.
ಮತಯಂತ್ರಗಳು ಶಿವಮೊಗ್ಗಕ್ಕೆ ರವಾನೆ
ಸಂಜೆ ಆರು ಗಂಟೆ ಮತದಾನ ಪ್ರಕ್ರಿಯೆ ಮುಗಿದ ನಂತರ ಮತಯಂತ್ರ ಗಳನ್ನು ಡಿಮಸ್ಟರಿಂಗ್ ಕೇಂದ್ರವಾದ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ ತರಲಾಗಿದ್ದು, ಈ ಪ್ರಕ್ರಿಯೆ ರಾತ್ರಿವರೆಗೂ ಮುಂದುವರೆದಿತ್ತು.
ರಾತ್ರಿ ಪರಿಶೀಲನೆ ನಡೆಸಿದ ಬಳಿಕ ಮತಯಂತ್ರಗಳನ್ನು ಕಂಟೈನರ್ಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದ ಭದ್ರತೆಯಲ್ಲಿ ಶಿವಮೊಗ್ಗಕ್ಕೆ ರವಾನಿಸಲಾಗುತ್ತದೆ. ತಡರಾತ್ರಿಯವರೆಗೂ ಪರಿಶೀಲನೆ ಕಾರ್ಯ ಮುಗಿಯದಿದ್ದರೆ ಬುಧವಾರ ಮುಂಜಾನೆ ಮತಯಂತ್ರಗಳನ್ನು ಸಾಗಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಡಿಸಿ, ಎಸ್ಪಿಯಿಂದ ಮತದಾನ ಪರಿಶೀಲನೆ
ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಇಂದು ಕ್ಷೇತ್ರದಾ ದ್ಯಂತ ಸಂಚರಿಸಿ ಮತದಾನ ಕೇಂದ್ರಗಳಿಗೆ ಭೇಟಿ ನೀಡಿದರು. ರಾತ್ರಿ ಅವರು ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ ಡಿಮಸ್ಟರಿಂಗ್ ಕೇಂದ್ರದಲ್ಲಿದ್ದು, ಎಲ್ಲಾ ಪ್ರಕ್ರಿಯೆಗಳನ್ನು ನೋಡಿಕೊಳ್ಳುತಿದ್ದಾರೆ.