ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.76.41ರಷ್ಟು ಮತದಾನ
ಉಡುಪಿ, ಮೇ8: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ನಡೆದ ಮತದಾನದಲ್ಲಿ ಕ್ಷೇತ್ರದ ಶೇ.76.41ರಷ್ಟು ಮಂದಿ ತಮ್ಮ ಮತವನ್ನು ಚಲಾಯಿಸಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೈಂದೂರು ತಾಲೂಕಿನ 26 ಮತ್ತು ಕುಂದಾಪುರ ತಾಲೂಕಿನ 39 ಸೇರಿದಂತೆ ಒಟ್ಟು 65 ಗ್ರಾಮಗಳಲ್ಲಿರುವ 246 ಮತಗಟ್ಟೆಗಳಲ್ಲಿದ್ದ ಒಟ್ಟು 2,40,500 ಮಂದಿ ಮತದಾರರಲ್ಲಿ ಅಂತಿಮ ವಾಗಿ 1,83,757 ಮಂದಿ ಮತ ಚಲಾಯಿಸಿದ್ದಾರೆ ಎಂದು ಡಾ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷೇತ್ರದಲ್ಲಿರುವ 1,17,711 ಮಂದಿ ಪುರುಷ ಮತದಾರರ ಪೈಕಿ 85,353 ಮಂದಿ ಹಾಗೂ 1,22,786 ಮಹಿಳಾ ಮತದಾರರ ಪೈಕಿ 98,401 ಮಂದಿ ತಮ್ಮ ಮತ ಚಲಾಯಿಸಿದ್ದಾರೆ. ಮತದಾರರ ಪಟ್ಟಿಯಲ್ಲಿದ್ದ ಮೂವರು ತೃತೀಯ ಲಿಂಗಿಗಳು ತಮ್ಮ ಮತ ಹಾಕಿದ್ದಾರೆ.
2019ರಲ್ಲಿ ನಡೆದ ಶಿವಮೊಗ್ಗ ಕ್ಷೇತ್ರದ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಶೇ.75.26ರಷ್ಟು, 2104ರ ಲೋಕಸಭಾ ಚುನಾವಣೆಯಲ್ಲಿ ಶೇ.72.92ರಷ್ಟು ಮತ್ತು 2023ರ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಶೇ.77.86 ರಷ್ಟು ಮತದಾನವಾಗಿತ್ತು.
ಶಿವಮೊಗ್ಗ ಕ್ಷೇತ್ರದಲ್ಲಿ ಶೇ.78.33 ಮತದಾನ: ನಿನ್ನೆ ನಡೆದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೇ.78.33 ರಷ್ಟು ಮತದಾನವಾಗಿದೆ. ಕ್ಷೇತ್ರದ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಶೇ.83.66, ಭದ್ರಾವತಿಯಲ್ಲಿ ಶೇ.71.89, ಶಿವಮೊಗ್ಗದಲ್ಲಿ ಶೇ.70.20, ತೀರ್ಥಹಳ್ಳಿ ಯಲ್ಲಿ ಶೇ.82.24, ಶಿಕಾರಿಪುರದಲ್ಲಿ ಶೇ.82.64, ಸೊರಬ ಕ್ಷೇತ್ರದಲ್ಲಿ ಶೇ.82.82 ಹಾಗೂ ಸಾಗರ ಕ್ಷೇತ್ರದಲ್ಲಿ 80.24ರಷ್ಟು ಮತದಾನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.