ಉಡುಪಿ ಜಿಲ್ಲೆಯಲ್ಲಿ 77.8 ಮಿ.ಮೀ. ಮಳೆ, ಸಮುದ್ರ ಕೊರೆತ ಸಾಧ್ಯತೆ; ಮೀನುಗಾರರಿಗೆ ಎಚ್ಚರಿಕೆ
ಬ್ರಹ್ಮಾವರದಲ್ಲಿ 100 ಮಿ.ಮೀ. ಮಳೆ

ಫೈಲ್ ಫೋಟೊ
ಉಡುಪಿ, ಜೂ.27: ಕಳೆದ 36 ಗಂಟೆಗಳಿಂದ ಉಡುಪಿ ಜಿಲ್ಲೆಯಾದ್ಯಂತ ಗಾಳಿ-ಗುಡುಗು-ಮಿಂಚುಗಳಿಲ್ಲದೇ ನಿರಂತರ ಮಳೆ ಸುರಿಯುತಿದ್ದು, ತಗ್ಗು ಪ್ರದೇಶಗಳೆಲ್ಲಾ ನೀರಿನಿಂದ ಆವೃತ್ತವಾಗಿವೆ. ಜಿಲ್ಲೆಯ ಅನೇಕ ಕಡೆಗಳಲ್ಲಿ ಕೃತಕ ನೆರೆ ಕಂಡು ಬಂದಿದ್ದು, ಜನರು ಪರದಾಡುವಂತಾಗಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಬ್ರಹ್ಮಾವರ ತಾಲೂಕಿನಲ್ಲಿ ಅತ್ಯಧಿಕ 100 ಮಿ.ಮೀ. (10ಸೆ.ಮಿ.) ಮಳೆ ಸುರಿದಿದೆ. ಇದೇ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 77.8ಮಿ.ಮೀ. ಮಳೆಯಾಗಿದೆ. ಬೈಂದೂರಿನಲ್ಲಿ 92ಮಿ.ಮೀ, ಕುಂದಾಪುರದಲ್ಲಿ 91.8ಮಿ.ಮೀ., ಕಾಪುವಿನಲಿ 74.2 ಮಿ.ಮೀ, ಹೆಬ್ರಿಯಲ್ಲಿ 69.9ಮಿ.ಮೀ, ಉಡುಪಿಯಲ್ಲಿ 59.7 ಕಾರ್ಕಳದಲ್ಲಿ 51.4 ಮಿ.ಮೀ. ಮಳೆಯಾದ ವರದಿ ಬಂದಿದೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆ-ಗಾಳಿಯಿಂದ 15ಕ್ಕೂ ಅಧಿಕ ಮನೆ, ಸೊತ್ತುಗಳಿಗೆ ಹಾನಿಯುಂಟಾದ ಮಾಹಿತಿಗಳು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಮಿಗೆ ಬಂದಿವೆ. ಇದರಿಂದ ನಾಲ್ಕು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿರುವ ಅಂದಾಜು ಮಾಡಲಾಗಿದೆ.
ಕಳೆದ 48 ಗಂಟೆಗಳಿಂದ ಬ್ರಹ್ಮಾವರ ತಾಲೂಕಿನಾದ್ಯಂತ ಅತ್ಯಧಿಕ ಮಳೆಯಾಗುತ್ತಿದೆ. ಇದರಿಂದ ಇಲ್ಲಿ ಎಂಟಕ್ಕೂ ಅಧಿಕ ಮನೆಗಳಿಗೆ ಹಾನಿಯಾದ ವರದಿಗಳಿವೆ. ತಾಲೂಕಿನ ಹೇರೂರಿನ ನಾರಾಯಣ, ವಂಡಾರಿನ ಆನಂದ ನಾಯ್ಕ್, ಹಾವಂಜೆಯ ಬಡಿಯ, ನಂಚಾರಿನ ಗೋವಿಂದ ನಾಯ್ಕ, ಹೆಗ್ಗುಂಜೆಯ ಮಹಾಬಲ ಮರಕಾಲ ಹಾಗೂ 38 ಕಳ್ತೂರಿನ ಮಂಜುನಾಥ ನಾಯ್ಕ ಇವರ ವಾಸ್ತವ್ಯದ ಮನೆಗಳಿಗೆ ಭಾಗಶ: ಹಾನಿಯಾಗಿರುವ ಮಾಹಿತಿಗಳು ಬಂದಿವೆ.
ಅಲ್ಲದೇ ಬ್ರಹ್ಮಾವರ ಹಿಲಿಯಾಣದ ವನಜ ಕುಲಾಲ್ತಿ ಇವರ ಜಾನುವಾರು ಕೊಟ್ಟಿಗೆ ಗಾಳಿ-ಮಳೆಯಿಂದ ಹಾನಿಗೊಳ ಗಾಗಿದೆ. ಇನ್ನುಳಿದಂತೆ ಕಾರ್ಕಳ ತಾಲೂಕು ಮಾಳದ ಲೋಕೇಶ ನಾಯ್ಕ ಇವರ ಮನೆಯ ಮೇಲೆ ಮರ ಬಿದ್ದು 50 ಸಾವಿರ ರೂ.ಗಳಿಗೂ ಅಧಿಕ ನಷ್ಟವಾಗಿದೆ.
ಉಡುಪಿ ತಾಲೂಕು ಕಡೆಕಾರು ಗ್ರಾಮದ ಸೀತಾ ಪೂಜಾರ್ತಿ ಇವರ ಮನೆಗೆ 25ಸಾವಿರ ರೂ., ಶಿವಳ್ಳಿ ಗ್ರಾಮದ ಶಕುಂತಳ ಎಂಬವರ ಮನೆಗೆ 50ಸಾವಿರ, ಅಲೆವೂರು ಗ್ರಾಮದ ಪದ್ಮಾವತಿ ಪ್ರಭು ಮನೆಗೆ 70ಸಾವಿರ ಹಾಗೂ ಪಡುತೋನ್ಸೆ ಗ್ರಾಮದ ವಿಠಲ್ ಪೂಜಾರಿ ಮನೆಗೆ 50 ಸಾವಿರ ರೂ., ಕುಂದಾಪುರ ತಾಲೂಕು ಗುಲ್ವಾಡಿಯ ಉದಯ ಕುಮಾರ್ ಶೆಟ್ಟಿ ಇವರ ಮನೆಗೆ 30ಸಾವಿರ ರೂ. ನಷ್ಟದ ಮಾಹಿತಿಗಳು ಇಲ್ಲಿಗೆ ಬಂದಿವೆ.
ಮೀನುಗಾರರಿಗೆ ಎಚ್ಚರಿಕೆ: ಜೂ.26ರಿಂದ 29ರವರೆಗೆ ಕರ್ನಾಟಕ ಕರಾವಳಿಯ ಜಿಲ್ಲೆಗಳಲ್ಲಿ ಥಂಡಿ ಹವೆ ಇರಲಿದ್ದು, ಗಂಟೆಗೆ 35ರಿಂದ 45 ಕಿ.ಮೀ. ವೇಗದ ಗಾಳಿ ಬೀಸಲಿರುವ ಕಾರಣ ಸಮುದ್ರ ಪ್ರಕ್ಷುಬ್ಧಗೊಳ್ಳಲಿದ್ದು, ಇದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ತಿರುವನಂತಪುರದ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ.
ಅಲ್ಲದೇ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಮುದ್ರ ತೀರಗಳಲ್ಲಿ ಜೂ.27ರ ರಾತ್ರಿ 11:30ರವರೆಗೆ 2.5ರಿಂದ 3.5-4 ಮೀ. ಎತ್ತರದ ಅಲೆಗಳು ಏಳಲಿದ್ದು ದಡವನ್ನು ಅಪ್ಪಳಿಸುವ ಸಾಧ್ಯತೆ ಇರುತ್ತದೆ. ಆದುದರಿಂದ ಮೂರು ಜಿಲ್ಲೆಗಳ ಕರಾವಳಿ ತೀರದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ, ಮೀನುಗಾರಿಕಾ ದೋಣಿಗಳು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು, ಹಲವು ಕಡೆಗಳಲ್ಲಿ ಸಮುದ್ರ ಕೊರೆತವೂ ಕಾಣಿಸಿಕೊಳ್ಳುವ ಸಾದ್ಯತೆ ಇರುವುದಾಗಿ ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ.







