ಉಡುಪಿ: ಮಾ.8ರಿಂದ ಸಂವಿಧಾನ ಓದು ಅಧ್ಯಯನ ಶಿಬಿರ
ಉಡುಪಿ, ಮಾ.6: ಉಡುಪಿ ಜಿಲ್ಲಾ ಮಟ್ಟದ ’ಸಂವಿಧಾನ ಓದು ಅಧ್ಯಯನ ಶಿಬಿರ’ವನ್ನು ಸಂವಿಧಾನ ಓದು ಅಭಿಯಾನ ಕರ್ನಾಟಕ, ವಿಮಾ ನೌಕರರ ಸಂಘ ಉಡುಪಿ ವಿಭಾಗ ಮತ್ತು ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಸಂಯುಕ್ತವಾಗಿ ಆಯೋಜಿಸಿದ್ದು, ಮಾ.8 ಹಾಗೂ 9ರಂದು ನಗರದ ಎಲ್‌ಐಸಿ ಎಂಪ್ಲಾಯೀಸ್ ಕೊ-ಆಪರೇಟಿವ್ ಬ್ಯಾಂಕ್ ಹಾಲ್‌ನಲ್ಲಿ ನಡೆಯಲಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಪ್ರತಿನಿಧಿಸಿ, ಸ್ನಾತಕೋತ್ತರ ವಿದ್ಯಾರ್ಥಿಗಳು, ಸಾಮಾಜಿಕ-ಸಾಂಸ್ಕೃತಿಕ ಹಾಗೂ ಪ್ರಗತಿಪರ ಆಶಯವುಳ್ಳ 250 ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳಲ್ಲಿದ್ದಾರೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
ಶಿಬಿರವನ್ನು ನಾಳೆ ಬೆಳಗ್ಗೆ 10ಕ್ಕೆ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಉದ್ಘಾಟಿಸಲಿ ದ್ದಾರೆ. ಅತಿಥಿಗಳಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ, ಉಡುಪಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾರಾಯಣ ಸ್ವಾಮಿ ಎಂ, ಸಹಾಯಕ ನಿರ್ದೇಶಕ ರೋಷನ್ ಕುಮಾರ್, ಜಿ. ಶಂಕರ್ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ನಿಕೇತನ, ವಿಮಾ ನೌಕರರ ಸಂಘದ ಅಧ್ಯಕ್ಷರಾದ ಪ್ರಭಾಕರ ಬಿ.ಕುಂದರ್ ಪಾಲ್ಗೊಳ್ಳಲಿದ್ದಾರೆ.
ಎರಡು ದಿನಗಳ ಶಿಬಿರದಲ್ಲಿ ಸಂವಿಧಾನ ರಚನೆ ಮತ್ತು ಮೂಲತತ್ವಗಳ ಕುರಿತು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್, ಸಂವಿಧಾನ ಮತ್ತು ಮಹಿಳೆ ಕುರಿತು ಶಾಂತಿ ನಾಗಲಾಪುರ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕುರಿತು ಎನ್. ಜಯಕುಮಾರ್, ಎರಡನೇ ದಿನ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಕುರಿತು ಬಿ.ರಾಜಶೇಖರಮೂರ್ತಿ, ಸಂವಿಧಾನ ಮತ್ತು ಜಾತ್ಯಾತೀತತೆ ಕುರಿತು ಆರ್.ರಾಮಕೃಷ್ಣ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ.
ಮಾ.9ರ ಅಪರಾಹ್ನ 1 ಗಂಟೆಗೆ ಸಮಾರೋಪ ಮತ್ತು ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ವಹಿಸಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಪ್ರಸಾದ್‌ರಾಜ್ ಕಾಂಚನ್, ಸಂತೋಷ್ ಕರ್ನೆಲಿಯೊ, ಯಾಸೀನ್ ಮಲ್ಪೆ, ವಿಮಾ ನೌಕರರ ಸಂಘದ ಹಿರಿಯ ಮುಖಂಡ ಪಿ. ವಿಶ್ವನಾಥ ರೈ ಭಾಗವಹಿಸಲಿದ್ದಾರೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.







