ಮೇ 8ರಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಉಡುಪಿಗೆ ಭೇಟಿ

ಉಡುಪಿ, ಮೇ 7: ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಮೇ 8ರಂದು ಇಡೀ ದಿನ ಉಡುಪಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿ ದ್ದಾರೆ. ಇಂದು ಸಂಜೆ ಹೊಸದಿಲ್ಲಿಯಿಂದ ಹೊರಟು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಸಚಿವರು ರಾತ್ರಿ ಮಂಗಳೂರು ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಗುರುವಾರ ಬೆಳಗ್ಗೆ 7:30ಕ್ಕೆ ಮಂಗಳೂರಿನಿಂದ ಹೊರಟು ಬೆಳಗ್ಗೆ 8:30ಕ್ಕೆ ಕಾರ್ಕಳದ ಆನೆಕೆರೆ ಜೈನ ಬಸದಿ, ರಾಮಸಮುದ್ರ ಕೆರೆಯನ್ನು ವೀಕ್ಷಿಸುವ ಸಚಿವರು ಬಳಿಕ 9:30ಕ್ಕೆ ಕಾರ್ಕಳ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಬೆಳಗ್ಗೆ 10:45ಕ್ಕೆ ಚಿಕ್ಕಮಗಳೂರು ಜಿಲ್ಲೆ ಹೊರನಾಡುಗೆ ತೆರಳುವ ಸಚಿವ ಶೆಖಾವತ್, ಅಪರಾಹ್ನ 1:20ಕ್ಕೆ ಕಳಸ ಹೆಲಿಪ್ಯಾಡ್ ಮೂಲಕ 1:45ಕ್ಕೆ ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ.
ಹೆಲಿಪ್ಯಾಡ್‌ನಿಂದ ನೇರವಾಗಿ ಕೊಲ್ಲೂರಿಗೆ ತೆರಳುವ ಸಚಿವರು ಅಲ್ಲಿ ಕೊಲ್ಲೂರು ಕಾರಿಡಾರ್ ಹಾಗೂ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಿದ್ದಾರೆ. ಸಂಜೆ 4:30ಕ್ಕೆ ಕೊಲ್ಲೂರಿನಿಂದ ಹೊರಟು 5:00ಗಂಟೆಗೆ ಒತ್ತಿನೆಣೆ, 5:45ಕ್ಕೆ ಸೋಮೇಶ್ವರ ಬೀಚ್, 6:00ಕ್ಕೆ ಮರವಂತೆಗೆ, 6:45ಕ್ಕೆ ಕೋಟದಲ್ಲಿರುವ ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಭೇಟಿ ನೀಡಿದ ಬಳಿಕ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ರಾತ್ರಿ 7:15ಕ್ಕೆ ಕೋಟದಿಂದ ಹೊರಟು 9:15ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ 10:45ರ ವಿಮಾನದಲ್ಲಿ ಬೆಂಗಳೂರಿಗೆ ತೆರಳಿದ್ದಾರೆ ಎಂದು ಸಚಿವರ ಪ್ರವಾಸ ಕಾರ್ಯಕ್ರಮದಲ್ಲಿ ತಿಳಿಸಲಾಗಿದೆ.







