ಎನ್‌ಸಿಬಿ ಬೇಧಿಸಿದ ಬೃಹತ್ ಅಂ.ರಾ. ಮಾದಕದ್ರವ್ಯ ಜಾಲ: ಉಡುಪಿಯ ಕಾಲ್‌ಸೆಂಟರ್ ನಿರ್ವಾಹಕ ಸೇರಿ 8 ಮಂದಿ ಸೆರೆ

ಉಡುಪಿ, ಜು.3: ಹೊಸದಿಲ್ಲಿ ಕೇಂದ್ರಿತವಾಗಿ ಉಡುಪಿಯೂ ಸೇರಿದಂತೆ ದೇಶದ ನಾಲ್ಕು ನಗರಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತಿದ್ದ ಬೃಹತ್ ಅಕ್ರಮ ಫಾರ್ಮಸ್ಯೂಟಿಕಲ್ ಡ್ರಗ್ ಜಾಲವನ್ನು ಭಾರತದ ಮಾದಕದ್ರವ್ಯ ನಿಯಂತ್ರಣ ಬ್ಯುರೋ (ಎನ್‌ಸಿಬಿ) ಬೇಧಿಸಿದ್ದು, ದೇಶದ ವಿವಿಧೆಡೆಗಳಲ್ಲಿ ಒಟ್ಟು ಎಂಟು ಮಂದಿಯನ್ನು ಬಂಧಿಸಿದೆ. ಬಂಧಿತರಲ್ಲಿ ಉಡುಪಿಯ ಕಾಲ್‌ಸೆಂಟರ್ ಒಂದರ ತಮಿಳು ಮೂಲದ ನಿರ್ವಾಹಕನೂ ಸೇರಿದ್ದಾನೆ.
ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ವ್ಯಾಪಿಸಿರುವ ಈ ಬೃಹತ್ ಅಕ್ರಮ, ನಿಷೇಧಿತ ಮಾದಕ ದ್ರವ್ಯಗಳ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಿದ್ದರೆ, ವಿವಿಧೆಡೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಐದು ಮಾದಕದ್ರವ್ಯ ಸರಕು ಸಾಗಾಟವನ್ನು ವಶಪಡಿಸಿಕೊ ಳ್ಳಲಾಗಿದೆ ಎಂದು ಎನ್‌ಸಿಬಿ ಹೊಸದಿಲ್ಲಿಯಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಇದರಲ್ಲಿ ಆಧುನಿಕ ಅಕ್ರಮ ವ್ಯವಹಾರ ಜಗತ್ತು ಬಳಸುವ ಎಲ್ಲಾ ತಾಂತ್ರಿಕತೆಯನ್ನು -ಡಿಜಿಟಲ್ ಪ್ಲಾಟ್‌ಫಾರಂ, ಕ್ರಿಫ್ಟೋ ಕರೆನ್ಸಿ, ನಿಯಂತ್ರಿತ ಮೆಡಿಸಿನ್‌ನ ಕಳ್ಳಸಾಗಣಿಕೆ- ಬಳಸಿಕೊಳ್ಳಲಾಗಿತ್ತು ಎಂದಿದೆ.
‘ಆಪರೇಷನ್ ಮೆಡ್ ಮ್ಯಾಕ್ಸ್’ ಎಂಬ ಹೆಸರಿನಲ್ಲಿ ಎನ್‌ಸಿಬಿ ನಡೆಸಿದ ಕಾರ್ಯಾಚರಣೆಯಲ್ಲಿ ಅಮೆರಿಕ, ಆಸ್ಟ್ರೇಲಿಯ ಸೇರಿದಂತೆ 10ಕ್ಕೂ ಅಧಿಕ ದೇಶಗಳು ಹಾಗೂ ನಾಲ್ಕು ಖಂಡಗಳ್ಲಿ ಕಾರ್ಯನಿರ್ವಹಿಸುತಿದ್ದ ಅತ್ಯಾಧುನಿಕ ಡ್ರಗ್ ಸಿಂಡಿಕೇಟ್‌ನ್ನು ಬಯಲಿಗೆಳೆದಿದೆ.
ಭಾರತದಲ್ಲಿ ಇದು ಹೊಸದಿಲ್ಲಿ ಕೇಂದ್ರಿತವಾಗಿ ಉಡುಪಿ, ರೂರ್ಕಿ ಹಾಗೂ ಜೈಪುರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಈ ನಾಲ್ಕು ಕೇಂದ್ರಗಳಲ್ಲಿ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ‘ಎಕ್ಸ್’ ಪೋಸ್ಟ್ ಒಂದರ ಮೂಲಕ ಈ ಬೃಹತ್ ಕಾರ್ಯಾಚರಣೆಯನ್ನು ಬಹಿರಂಗ ಪಡಿಸಿ ಇದಕ್ಕಾಗಿ ಎನ್‌ಸಿಬಿಯನ್ನು ಅಭಿನಂದಿಸಿದ್ದರು.
ಅಕ್ರಮ ಚಟುವಟಿಕೆಯ ಕುರಿತು ಸುಳಿವು ನೀಡದಿರಲು ದೇಶದ ನಾಲ್ಕು ಮೂಲೆಗಳಲ್ಲಿ ಒಂದೊಂದು ಕಾರ್ಯಾಚರಣೆಯನ್ನು ನಡೆಸಲಾಗುತಿತ್ತು. ಇದರಲ್ಲಿ ಉಡುಪಿಯಲ್ಲಿ ಇದಕ್ಕೆ ಸಂಬಂಧಿಸಿದ ಕಾಲ್‌ಸೆಂಟರ್ ಕಾರ್ಯ ನಿರ್ವಹಿಸುತ್ತಿತ್ತು. ಡ್ರಗ್ ಸಾಗಾಟವಾಗಲಿ, ಸಂಗ್ರಹವಾಗಲಿ ಯಾವುದೂ ಇಲ್ಲಿ ನಡೆಯುತ್ತಿರಲಿಲ್ಲ. ಇಲ್ಲಿನ ಕಾಲ್‌ಸೆಂಟರ್ ಮೂಲಕ ವಿಶ್ವದ ಮೂಲೆ ಮೂಲೆಯ ಸಂಪರ್ಕ, ಮಾಹಿತಿ ಇಲ್ಲಿಗೆ ಬರುತಿತ್ತು.
ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಹಯಗ್ರೀವ ನಗರದ 7ನೇ ಕ್ರಾಸ್‌ನಲ್ಲಿ ‘ಮೆಡ್‌ಮ್ಯಾಕ್ಸ್ ಡಿಜಿಟಲ್’ ಎಂಬ ಈ ಕಾಲ್‌ಸೆಂಟರ್ ಕಾರ್ಯನಿರ್ವಹಿಸುತ್ತಿತ್ತು. ಇದನ್ನು ನಿರ್ವಹಿಸುತಿದ್ದ ಸುರೇಶ್ ಕುಮಾರ್ ಕೆ. ಎಂಬಾತನನ್ನು ಎನ್‌ಸಿಬಿಯ ಅಧಿಕಾರಿಗಳು ಒಂದು ತಿಂಗಳ ಹಿಂದೆಯೇ ಬಂಧಿಸಿ ದಿಲ್ಲಿಗೆ ಕರೆದೊಯ್ದಿದ್ದರು. ಈ ಕಾಲ್‌ಸೆಂಟರ್‌ನಲ್ಲಿ 10 ಮಂದಿ ಕಾರ್ಯನಿರ್ವಹಿಸುತಿದ್ದರೂ, ಇವರ್ಯಾರಿಗೂ ಇಲ್ಲಿ ನಡೆಯುತ್ತಿರುವ ವ್ಯವಹಾರದ ಸುಳಿವೂ ಇದ್ದಿರಲಿಲ್ಲ ಎಂದು ಎನ್‌ಸಿಬಿ ತಿಳಿಸಿದೆ. ತಮಿಳು ಮೂಲದ ಸುರೇಶ್ ಕುಮಾರ್ ಕುರಿತಂತೆ ಹೆಚ್ಚಿನ ಮಾಹಿತಿ ಇನ್ನೂ ಸಿಕ್ಕಿಲ್ಲ.
ಕಳೆದ ಮೇ ತಿಂಗಳ 25ರಂದು ಹೊಸದಿಲ್ಲಿಯ ಬೆಂಗಾಲಿ ಮಾರ್ಕೆಟ್ ಬಳಿ ಮಾಮೂಲಿಯಾಗಿ ವಾಹನ ವೊಂದನ್ನು ತಡೆದು ನಡೆಸಿದ ತನಿಖೆಯು ಭಾರತದಾದ್ಯಂತ ನಡೆಯುತಿದ್ದ ಅತ್ಯಾಧುನಿಕ ಕ್ರಿಮಿನಲ್ ವೆಬ್ ಅಪರಾಧ ಜಾಲವನ್ನೂ ಅದು ಅಮೆರಿಕ, ಆಸ್ಟ್ರೇಲಿಯ ಹಾಗೂ ಯುರೋಪ್ ದೇಶಗಳಲ್ಲಿ ವ್ಯಾಪಿಸಿರು ವುದನ್ನು ಬಹಿರಂಗಪಡಿಸಿತ್ತು.
ಎನ್‌ಸಿಬಿಯ ವ್ಯವಸ್ಥಿತ ಕಾರ್ಯಾಚರಣೆ ಅಕ್ರಮ ಫಾರ್ಮಾ ನೆಟ್‌ವರ್ಕ್‌ನ ವಿಶ್ವವ್ಯಾಪಿಯನ್ನು ತೆರೆದಿ ಟ್ಟಿತು. ತನ್ನ ಜಾಗತಿಕ ನೆಟ್‌ವರ್ಕ್‌ನ ಮೂಲಕ ಈ ಜಾಲ ನಾಲ್ಕು ಖಂಡಗಳಲ್ಲಿ ಹಾಗೂ 10ಕ್ಕೂ ಅಧಿಕ ದೇಶಗಳಲ್ಲಿ ವ್ಯಾಪಿಸಿರುವುದನ್ನು ತನಿಖೆ ಬಹಿರಂಗ ಪಡಿಸಿತು. ಹೊಸದಿಲ್ಲಿಯಲ್ಲಿ ಪ್ರಾರಂಭವಾದ ತನಿಖೆ ಅಲಬಾಮಾವರೆಗೂ ಸಾಗಿತು ಎಂದು ಎನ್‌ಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಹೊಸದಿಲ್ಲಿಯ ಮಂಡಿ ಹೌಸ್ ಬಳಿ ಮೇ 25ರಂದು ಕಾರೊಂದನ್ನು ತಡೆದು ಅದರಲ್ಲಿದ್ದ ಇಬ್ಬರು ಬಿಫಾರ್ಮಾ ಪದವೀಧರರನ್ನು ಬಂಧಿಸಿ ಅವರಿಂದ 3.7ಕಿಗ್ರಾಂ ಟ್ರಮಡೋಲ್ ಮಾತ್ರೆಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಇಡೀ ಹಗರಣ ಬೆಳಕಿಗೆ ಬಂದಿತ್ತು. ಇವರು ತಾವು ಅಮೆರಿಕ, ಆಸ್ಟ್ರೇಲಿಯ ಹಾಗೂ ಯುರೋಪಿನ ಗ್ರಾಹಕರಿಗೆ ಔಷಧೀಯ ಮಾತ್ರೆಗಳಳನ್ನು (ಫಾರ್ಮಸ್ಯೂಟಿಕಲ್ ಪಿಲ್ಸ್) ಮಾರಾಟ ಮಾಡುತಿದ್ದನ್ನು ಒಪ್ಪಿಕೊಂಡರು.
ಈ ನೀಡಿದ ಸುಳಿವಿನ ಮೂಲಕ ರೂರ್ಕಿಯ ಸ್ಟಾಕಿಸ್ಟ್ ಒಬ್ಬನನ್ನು ಬಂಧಿಸಲಾಯಿತು. ಅಲ್ಲದೇ ಇವುಗಳ ಪ್ರದಾನ ಸೂತ್ರಧಾರಿ ಎನ್ನಲಾದ ಒಬ್ಬನನ್ನು ಹೊಸದಿಲ್ಲಿಯ ಮಯೂರ ವಿಹಾರದಲ್ಲಿ ಬಂಧಿಸಲಾಯಿತು. ಇವರೆಲ್ಲರ ಬಂಧನ ಉಡುಪಿಯಲ್ಲಿ ಕಾರ್ಯಾಚರಿಸುತಿದ್ದ ಕಾಲ್‌ಸೆಂಟರ್ ಪತ್ತೆಗೆ ಕಾರಣವಾಯಿತು.
ಉಡುಪಿಯ ಕಾಲ್‌ಸೆಂಟರ್ ಅಮೆರಿಕದಿಂದ ಡ್ರಗ್ಸ್ ಬರುವ ಬೇಡಿಕೆಗಳನ್ನು ನಿರ್ವಹಿಸುವ ಸಂಗತಿ ಬೆಳಕಿಗೆ ಬಂದಿತ್ತು. ಉಡುಪಿಯಲ್ಲಿ ಸಿಕ್ಕಿದ ಅಗಾಧ ಮಾಹಿತಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ 50 ಡ್ರಗ್ ಸರಕು ಸಾಗಾಟದ ಮಾಹಿತಿ ಹೊರಬಿತ್ತು. ಇವುಗಲಲ್ಲಿ 29 ಅಮೆರಿಕದಲ್ಲಿ, 18 ಆಸ್ಟ್ರೇಲಿಯದಲ್ಲಿ, ಈಸ್ಟೋನಿಯಾ, ಸ್ಪೈನ್, ಸ್ವಿಝರ್‌ಲೆಂಡ್‌ಗಳಲ್ಲಿ ತಲಾ ಒಂದು ಸರಕು ಸಾಗಾಟವಾದ ಬಗ್ಗೆ ಮಾಹಿತಿ ಸಿಕ್ಕಿತ್ತು.
ಇದಾದ ಬಳಿಕ ಎನ್‌ಸಿಬಿ ತನ್ನ ಮಾಹಿತಿಗಳನ್ನು ಇಂಟರ್‌ಪೋಲ್ ಹಾಗೂ ಆಯಾ ದೇಶಗಳ ತನಿಖಾ ಸಂಸ್ಥೆಗಳೊಂದಿಗೆ ಹಂಚಿಕೊಂಡು ಅಲ್ಲಿ ಇದರಲ್ಲಿ ಭಾಗೀದಾರರ ಬಂಧನಕ್ಕೆ ಕಾರಣವಾಯಿತು. ತನಿಖೆಯು ಡಿಜಿಟಲ್ ಡ್ರಗ್ ವ್ಯವಹಾರ, ಕ್ರಿಫ್ಟೋ ಪಾವತಿ, ಡಾರ್ಕ್ ವೆಬ್ ಲಾಜಿಸ್ಟಿಕ್‌ನ ಬೆಳೆಯುತಿರುವ ಸಂಬಂಧ ವನ್ನು ಬಹಿರಂಗ ಪಡಿಸಿದೆ ಎಂದು ಎನ್‌ಸಿಬಿ ಹೇಳಿಕೆ ತಿಳಿಸಿದೆ.
ಈ ಬೃಹತ್ ಜಾಲದ ಒಂದು ಕೊಂಡಿಯನ್ನು ಎನ್‌ಸಿಬಿ ಉಡುಪಿಯಲ್ಲಿ ಬಂದಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಇಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಈ ಕಾರ್ಯಾಚರಣೆಯನ್ನು ಎನ್‌ಸಿಬಿ ನೇರವಾಗಿ ನಡೆಸಿದ್ದು, ಇದರಲ್ಲಿ ಉಡುಪಿ ಪೊಲೀಸರಿಗೆ ಯಾವುದೇ ಪಾತ್ರವಿರಲಿಲ್ಲ ಎಂದಿದ್ದಾರೆ.







