ಉಡುಪಿ ಜಿಲ್ಲೆಯಲ್ಲಿ 80,669 ಸಂಘಟಿತ, ಅಸಂಘಟಿತ ಕಾರ್ಮಿಕರ ನೋಂದಣಿ: ಡಿಸಿ ಸ್ವರೂಪ ಟಿ.ಕೆ

ಉಡುಪಿ, ಸೆ.19: ಜಿಲ್ಲೆಯಲ್ಲಿ ಈವರೆಗೆ ಒಟ್ಟು 80,669 ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ನೋಂದಣಿ ಯಾಗಿದೆ. ಈ ಕಾರ್ಮಿಕರಿಗೆ ಆರೋಗ್ಯ ಹಾಗೂ ಪೊಲೀಸ್ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಾಗಾರ ಗಳನ್ನು ನಡೆಸಿ ಮಾದಕ ವ್ಯಸನ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.
ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಶುಕ್ರವಾರ ನಡೆದ ಮಾದಕ ದ್ರವ್ಯ ಸಮನ್ವಯ ಕೇಂದ್ರದ (ಎನ್‌ಸಿಓಆರ್‌ಡಿ) ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಉತ್ತರ ಭಾರತದಿಂದ ಕೂಲಿ ಕಾರ್ಮಿಕರು ಹೆಚ್ಚಾಗಿ ರೈಲುಗಳ ಮೂಲಕ ಜಿಲ್ಲೆಗೆ ಆಗಮಿಸುತ್ತಾರೆ. ರೈಲ್ವೆ ಪೊಲೀಸ್ ಅಧಿಕಾರಿಗಳು ಮಾದಕ ವಸ್ತುಗಳ ಸಾಗಾಟ ನಡೆಸುವ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಅಂತಹ ವರನ್ನು ತಪಾಸಣೆಗೊಳಪಡಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ಗಳನ್ನು ನೀಡಿದರು.
ಯುವಜನತೆಗೆ ಅರಿವು: ಯುವಜನರು ಮಾದಕ ವಸ್ತುಗಳಿಗೆ ದಾಸರಾಗಿ ಶಿಕ್ಷಣದಿಂದ ವಂಚಿತರಾಗುವುದರೊಂದಿಗೆ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಲ್ಲರೂ ನಿಗಾವಹಿಸಬೇಕು. ಮಾದಕ ವಸ್ತುಗಳ ಸೇವನೆುಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಲು ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚೆಚ್ಚು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಮಾದಕ ವಸ್ತುಗಳ ಸೇವನೆ ಯುವಜನರ ಭವಿಷ್ಯದ ಜೀವನವನ್ನು ಹಾಳು ಮಾಡುತ್ತದೆ. ಮಾದಕ ವ್ಯಸನಕ್ಕೆ ಒಳಗಾದ ಯುವಕರು ಅದರಿಂದ ಹೊರಬಂದು ಕ್ರಮಬದ್ಧ ಶಿಸ್ತು ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದ ಡಿಸಿ, ಜಿಲ್ಲೆಯ ಎಲ್ಲಾ ಮೆಡಿಕಲ್ ಸ್ಟೋರ್‌ಗಳಲ್ಲಿ ಸಿಸಿಟಿವಿ ಆಳವಡಿಸಿರುವ ಬಗ್ಗೆ ನಿಯಮಿತವಾಗಿ ಪರಿಶೀಲಿಸ ಬೇಕು ಎಂದರು.
ಅಂಚೆ ಇಲಾಖೆಯ ಅಧಿಕಾರಿಗಳು ಹೊರ ದೇಶಗಳಿಂದ ಬರುವ ಪಾರ್ಸೆಲ್ ಹಾಗೂ ಕೊರಿಯರ್‌ಗಳ ಮೇಲೆ ನಿಗಾ ಇರಿಸಿ ಸಂಶಯಾಸ್ಪದ ಅಂಚೆಪತ್ರಗಳು ಕಂಡುಬಂದಲ್ಲಿ ಕೂಡಲೇ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸೆನ್ ಪೊಲೀಸ್ ಸಹಯೋಗ ದಲ್ಲಿ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿ ಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಸಿದ್ಧ ಆಹಾರ ಪದಾರ್ಥಗಳ ತಪಾಸಣೆಯನ್ನು ಅಗಿಂದಾಗ್ಗೆ ನಡೆಸಿ, ಮಾದರಿಗಳನ್ನು ಪ್ರಯೋಗ ಶಾಲಾ ವಿಶ್ಲೇಷಣೆಗೆ ಕಳುಹಿಸುವ ಕೆಲಸ ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದರು.
ಕ್ಯೂಆರ್ ಕೋಡ್: ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮಾತನಾಡಿ, ಯುವ ಜನತೆ ಮಾದಕ ದ್ರವ್ಯ ಸೇವನೆಗೆ ಬಲಿಯಾಗಿ ಜೀವನ ಹಾಳು ಮಾಡದಂತೆ ತಡೆಯುವ ನಿಟ್ಟಿನಲ್ಲಿ ಅನಾಮಧೇಯ ವರದಿ ಮಾಡುವಿಕೆಗಾಗಿ ಕ್ಯೂಆರ್ ಕೋಡ್ ಅನ್ನು ಹೊರತರಲಾಗಿದ್ದು, ಇದನ್ನು ಜಿಲ್ಲೆಯ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ, ವಿದ್ಯಾರ್ಥಿ ನಿಲಯ ಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಬೇಕು ಎಂದರು.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ / ಸೇವನೆ ಕಂಡುಬಂದಲ್ಲಿ ಈ ಕ್ಯೂಆರ್ ಕೋಡ್‌ಅನ್ನು ಸ್ಕ್ಯಾನ್ ಮಾಡಿ ಗೌಪ್ಯವಾಗಿ ಮಾಹಿತಿ ಹಂಚಿ ಕೊಳ್ಳಬಹುದು. ಈಗಾಗಲೇ ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಶೈಕ್ಷಣಿಕ ಸಂಸ್ಥೆಗಳಲ್ಲಿ ಇದನ್ನು ಹೆಚ್ಚು ಪ್ರಚುರಪಡಿಸಬೇಕಾಗಿದೆ ಎಂದರು.
ಸಭೆಯಲ್ಲಿ ಡಿಎಫ್‌ಓ ಗಣಪತಿ, ಸಹಾಯಕ ಕಮಿಷನರ್ ರಶ್ಮಿ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.







