ಉಡುಪಿ ಜಿಲ್ಲೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ 8472 ಅರ್ಜಿ: ನೋಡಲ್ ಅಧಿಕಾರಿ

ಕುಂದಾಪುರ: ಕೇಂದ್ರ ಸರಕಾರದ ವಿವಿಧ ಯೋಜನೆಗಳ ಪ್ರಗತಿ ವಿಮರ್ಶೆ ಹಾಗೂ ಸಮರ್ಪಕ ಅನುಷ್ಟಾನದ ಕುರಿತು ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾ.ಪಂ ಅಧ್ಯಕ್ಷರು-ಉಪಾಧ್ಯಕ್ಷರು, ಪಿಡಿಒ ಅವರ ಸಭೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಕೈಗಾರಿಕಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಹಾಗೂ ಪಿಎಂ ವಿಶ್ವಕರ್ಮ ಯೋಜನೆಯ ನೋಡಲ್ ಅಧಿಕಾರಿ ಸೀತಾ ರಾಮ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 8472 ಪಿಎಂ ವಿಶ್ವಕರ್ಮ ಯೋಜನೆಗೆ ಫಲಾನುಭವಿಗಳಿಂದ ಅರ್ಜಿ ಬಂದಿದ್ದು, ಇದರಲ್ಲಿ 2852 ಅರ್ಜಿ ಡಿಸಿ ಲಾಗಿನ್ ಆಗಿ 2394 ಅರ್ಜಿ ಸ್ಟೇಟ್ ಲಾಗಿನ್ ಆಗಿದೆ. ಉಳಿದಂತೆ 4273 ಬಾಕಿಯಿದೆ ಎಂದು ತಿಳಿಸಿದರು.
ಕುಂದಾಪುರದಲ್ಲಿ ಒಟ್ಟು 2081 ಮತ್ತು ಬ್ರಹ್ಮಾವರ ತಾಲೂಕಿನಲ್ಲಿ 954 ಅರ್ಜಿ ಗಳು ಸ್ವೀಕರಿಸಲಾಗಿವೆ. ಜಿಲ್ಲೆಯಲ್ಲಿ ಒಟ್ಟು 5045 ಟೈಲರಿಂಗ್ ವೃತ್ತಿಯ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಮರ ಕೆಲಸ(ಕಾರ್ಪೆಂಟರಿಂಗ್) ವೃತ್ತಿಯವರು ನಿರೀಕ್ಷೆಗೂ ಕಡಿಮೆ ಪ್ರಮಾಣದಲ್ಲಿ ಅರ್ಜಿ ಸಲ್ಲಿಸಿದ್ದಾರೆಂದು ಅವರು ಮಾಹಿತಿ ನೀಡಿದರು.
ಪಿಎಂ ವಿಶ್ವಕರ್ಮ ಯೋಜನೆಯ ಬಗ್ಗೆ ಒಂದೂವರೆ ತಿಂಗಳ ಹಿಂದೆ ಜಿಲ್ಲೆಯ ಎಲ್ಲಾ ಗ್ರಾಪಂಗಳ ಅಧ್ಯಕ್ಷರಿಗೆ ಪಿಪಿಟಿ ಮೂಲಕ ಸಂದೇಶ ರವಾನಿಸಲಾಗಿದೆ. ಇದು ವಿಶ್ವಕರ್ಮರಿಗೆ ಮಾತ್ರವಲ್ಲ. ಬಡಗಿ, ಕಮ್ಮಾರ, ಚಮ್ಮಾರ, ಕ್ಷೌರಿಕ, ದೋಬಿ, ಟೈಲರಿಂಗ್, ಮೀನು ಬಲೆ ನೇಯ್ಗೆ ಮಾಡುವವರ ಸಹಿತ ಒಟ್ಟು 18 ಕುಶಲಕರ್ಮಿಗಳು ಈ ಯೋಜನೆ ಫಲಾನುಭವಿ ಗಳಾಗಿರುತ್ತಾರೆ ಎಂದರು.
ಈ ಯೋಜನೆಯಲ್ಲಿ ಗ್ರಾ.ಪಂ ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿದ್ದು, ಸಲ್ಲಿಸಿದ ಅರ್ಜಿಯನ್ನು ಆನ್ ಬೋರ್ಡ್‌ನಲ್ಲಿ ದಾಖಲಿಸಿ ಡಿಸಿಯವರ ಲಾಗ್ ಇನ್‌ಗೆ ಕಳುಹಿಸಬೇಕು. ಜಿಲ್ಲಾಧಿಕಾರಿಯಿಂದ ಅನುಮೋದನೆಗೊಂಡು ಸ್ಟೇಟ್ ಲಾಗ್ ಇನ್ ಆದ ಬಳಿಕ ಯೋಜನೆ ಲಭಿಸಲಿದೆ. ಇನ್ನೂ ಕೆಲ ಗ್ರಾಪಂಗಳು ಡಿಸಿ ಲಾಗ್‌ಇನ್ ಕಳಿಸದಿರುವುದರಿಂದ ಪ್ರಗತಿ ಕಡಿಮೆಯಾಗಿದೆ. ಅಲ್ಲದೆ ಕೆಲವು ತಾಂತ್ರಿಕ ಸಮಸ್ಯೆಗಳಿವೆ ಎಂದರು.
ಲೀಡ್ ಬ್ಯಾಂಕ್ ಮೆನೇಜರ್ ಪಿಂಜಾರ ಮಾತನಾಡಿ, 18 ರೀತಿಯಾದ ಕೆಲಸ ಮಾಡುವ ಕರಕುಶಲಕರ್ಮಿಗಳಿಗೆ ಜಿಲ್ಲೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ ಗುರುತಿಸಿ ವಿಶ್ವಕರ್ಮ ಗುರುತಿನ ಚೀಟಿ ನೀಡುವ ಜೊತೆಗೆ ಅಗತ್ಯ ತರಬೇತಿ ನೀಡಿ ಶೇ.5ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಸಂಬಂಧ ಪಟ್ಟವರು ಅಗತ್ಯ ಕ್ರಮವಹಿಸಬೇಕು. ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆ ತಲುಪಲು ವಾರ್ಡ್ ಮಟ್ಟದಲ್ಲಿ ಗುರುತಿಸಲು ಗ್ರಾ.ಪಂ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ವಿ. ಇಬ್ರಾಹಿಂಪುರ, ನಬಾರ್ಡ್ ಅಧಿಕಾರಿ ಸಂಗೀತಾ ಕರ್ಥ, ಹಿರಿಯ ಎಫ್‌ಎಲ್‌ಸಿ ಮೀರಾ ಜಿ. ಮೊದಲಾದವರು ಉಪಸ್ಥಿತರಿದ್ದರು.







