ಕುಂದಾಪುರ ತಾಲೂಕಿನಲ್ಲಿ ಅನ್ನಭಾಗ್ಯದ ಇ-ಕೆವೈಸಿ ಶೇ.87 ಪೂರ್ಣ: ಹರಿಪ್ರಸಾದ್ ಶೆಟ್ಟಿ

ಕುಂದಾಪುರ, ಅ.23: ಕುಂದಾಪುರ ತಾಲೂಕಿನಲ್ಲಿ ಅನ್ನಭಾಗ್ಯದ ಇ-ಕೆವೈಸಿ ಶೇ.87ರಷ್ಟು ಪೂರ್ಣಗೊಂಡಿದ್ದು, ಇ-ಕೆವೈಸಿ ಮಾಡದಿದ್ದರೂ ಎಲ್ಲಾ ಪಡಿತರ ಚೀಟಿದಾರರಿಗೆ ಸೆಪ್ಟಂಬರ್ ತಿಂಗಳ ಪಡಿತರ ನೀಡಲು ತೊಂದರೆ ನೀಡಬಾರದು ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಎಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದ್ದಾರೆ.
ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕುಂದಾಪುರ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಗೃಹಲಕ್ಷ್ಮೀ ಯೋಜನೆಯ ಪರಿಷ್ಕರಣೆ ಸಂದರ್ಭ ಮನೆ ಯಜಮಾನಿಯ ಆಧಾರ್ ಕಾರ್ಡ್‌ನಲ್ಲಿರುವ ಮೊಬೈಲ್ ನಂಬರ್ ಸರಿಯಾಗಿ ಇರಬೇಕು ಮತ್ತು ಆ ನಂಬರಿನ ಒಟಿಪಿ ಅಗತ್ಯವಾಗಿದೆ ಎಂದು ಸರಕಾರ ಸುತ್ತೋಲೆಯಲ್ಲಿ ತಿಳಿಸಿದೆ. ಹೀಗಾಗಿ ಪರಿಷ್ಕರಣೆ ಆರಂಭವಾಗುವುದರೊಳಗೆ ಫಲಾನುಭವಿಯ ಹೆಸರಿಗೆ ಮೊಬೈಲ್ ನಂಬರ್ ಮಾಡಿಕೊಳ್ಳಬೇಕು. ಗೃಹಜ್ಯೋತಿಯ ಪರಿಷ್ಕರಣೆ ಸಂದರ್ಭ ಮತದಾರರ ಗುರುತಿನ ಚೀಟಿ ಇಲ್ಲದಿರುವವರ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮಾಡಿಕೊಡುವ ವ್ಯವಸ್ಥೆ ಆಗಬೇಕು ಎಂದರು.
ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಮೇ ತಿಂಗಳಿನಲ್ಲಿ 36379 ಫಲಾನುಭವಿಗಳಿಗೆ ಮತ್ತು ಜೂನ್ ತಿಂಗಳಿನಲ್ಲಿ 4834 ಫಲಾನುಭವಿಗಳಿಗೆ ಹಣ ಪಾವತಿ ಬಾಕಿ ಇದೆ. ಅಲ್ಲದೆ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ ಹಣ ಪಾವತಿ ಕೂಡ ಬಾಕಿ ಇದೆ. ಮೇ ಮತ್ತು ಜೂನ್ ತಿಂಗಳ ಹಣ ಪಾವತಿ ಆಗದೆ ಜುಲೈ ತಿಂಗಳ ಹಣ ಪಾವತಿ ಮಾಡುವುದು ಸರಿಯಲ್ಲ. ಗೃಹಜ್ಯೋತಿ ಯೋಜನೆಯ ಪರಿಷ್ಕರಣೆಯನ್ನು ತಾಲೂಕಿನಲ್ಲಿ ಯಶಸ್ವಿಯಾಗಿ ಮಾಡಲಾಗಿದೆ ಎಂದರು.
ಹಲವು ಮಾರ್ಗಗಳಲ್ಲಿ ಹೆಚ್ಚುವರಿ ಸರಕಾರಿ ಬಸ್‌ಗಳನ್ನು ಓಡಿಸಬೇಕೆಂದು ಸದಸ್ಯರಾದ ನಾರಾಯಣ್ ಆಚಾರ್ಯ, ಅಭಿಜಿತ್ ಪೂಜಾರಿ ಹೇರಿಕುದ್ರು ಮತ್ತು ಜಹೀರ್ ಅಹಮ್ಮದ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಪ್ರಸ್ತುತ ಹೆಚ್ಚುವರಿ ಬಸ್ ಓಡಿಸಲು ಬಸ್ ಇಲ್ಲ, ಸಿಬ್ಬಂದಿಗಳ ಕೊರತೆಯೂ ಇದೆ ಮತ್ತು ಡಿಪೋದಲ್ಲಿ ಜಾಗವೂ ಇಲ್ಲ. ಬೈಂದೂರಿಗೆ ಹೊಸ ಡಿಪೋ ಮಂಜೂರಾಗಿದೆ ಎಂದು ಡಿಪೋ ಮ್ಯಾನೇಜರ್ ಉದಯ ಶೆಟ್ಟಿ ಹೇಳಿದರು.
ರೈಲು ಬರುವ ಸಂದರ್ಭ ಕುಂದಾಪುರ ರೈಲು ನಿಲ್ದಾಣಕ್ಕೆ ಸರಕಾರಿ ಬಸ್ ಒದಗಿಸಬೇಕು ಎಂದು ನಾರಾಯಣ ಆಚಾರ್ಯ ಒತ್ತಾಯಿಸಿದರು. ಕುಂದಾಪುರದಲ್ಲಿ ಡಿಪೋಗೆ ಜಾಗ ಹುಡುಕಿ ಎಂದು ಅಧಿಕಾರಿಗಳಿಗೆ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಸೂಚಿಸಿದರು. ಕಚೇರಿಗೆ ಹೋದರೆ ಗೃಹಲಕ್ಷ್ಮೀ ಹಣ ಬಂದಿದೆ ಎಂದು ಹೇಳುತ್ತಾರೆ, ಆದರೆ ಬ್ಯಾಂಕಿನವರು ಬಂದಿಲ್ಲ ಎಂದು ಹೇಳುತ್ತಾರೆ ಎಂದು ಸದಸ್ಯೆ ವಾಣಿ ಶೆಟ್ಟಿ ದೂರಿದರು.
ಗೃಹಲಕ್ಷ್ಮೀ ಯೋಜನೆ ಪರಿಷ್ಕಣೆಗಾಗಿ ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಪರಿಷ್ಕರಣೆಗೆ ಸರಕಾರ ದಿನಾಂಕ ನಿಗದಿಪಡಿಸಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹೇಳಿದರು.
ತಾಲೂಕಿನ ಮೆಸ್ಕಾಂನ ವಿವಿಧ ಶಾಖೆಗಳ ವ್ಯಾಪ್ತಿಯಲ್ಲಿ ಲೈನ್‌ಮೆನ್ ವರ್ಗಾವಣೆಯಿಂದ ಸಮಸ್ಯೆಯಾಗಿದ್ದು, ಬಗ್ಗೆ ಸದಸ್ಯ ಅಭಿಜಿತ್ ಪೂಜಾರಿ ಪ್ರಸ್ತಾಪ ಮಾಡಿದರು. ವರ್ಗಾವಣೆಯಾದ ಲೈನ್‌ಮೆನ್‌ಗಳ ಬದಲಿಗೆ ಹೊಸ ಲೈನ್‌ಮೆನ್‌ಗಳನ್ನು ನಿಯೋಜನೆ ಮಾಡಿದ್ದು, ಕೊರತೆ ಇರುವ ಲೈನ್‌ಮೆನ್ ಗಳನ್ನ್ನು ಮುಂದಿನ ನೇಮಕಾತಿ ಸಂದರ್ಭ ಒದಗಿಸುವ ಭರವಸೆಯನ್ನು ಹಿರಿಯ ಅಧಿಕಾರಿಗಳು ನೀಡಿದ್ದಾರೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.
ಅನ್ನಭಾಗ್ಯ ಯೋಜನೆಯ ಇ-ಕೆವೈಸಿ ಕಾರ್ಯ ತಾಲೂಕಿನಲ್ಲಿ ಶೇ.87ರಷ್ಟು ಪೂರ್ಣಗೊಂಡಿದ್ದು, ಕುಂದಾಪುರ ತಾಲೂಕು ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಒಟಿಪಿ ಮೂಲಕ ಇ-ಕೆವೈಸಿ ಮಾಡುವುದನ್ನು ಸ್ಥಗಿತಗೊಳಿಸ ಲಾಗಿದೆ ಎಂದು ಇಲಾಖೆ ಅಧಿಕಾರಿ ಕಿರಣ್ ಹೇಳಿದರು.
‘ಪಂಚಗ್ಯಾರೆಂಟಿ ಯೋಜನೆಯಲ್ಲಿ ಸೆಪ್ಟಂಬರ್ 2026ರ ಮಾಹೆಯ ಅಂತ್ಯಕ್ಕೆ ಗೃಹಜ್ಯೋತಿಯಲ್ಲಿ 4,51,95,365 ರೂ. ಅನ್ನಭಾಗ್ಯ ಯೋಜನೆಯಲ್ಲಿ 2,62,56,600ರೂ., ಯುವನಿಧಿಯಲ್ಲಿ 13,18,500ರೂ. ಮತ್ತು ಶಕ್ತಿ ಯೋಜನೆಯಲ್ಲಿ 3,22,89,378ರೂ. ಸೇರಿ ಒಟ್ಟು 10,50,59,843ರೂ. ಹಣ ತಾಲೂಕಿಗೆ ಲಭಿಸಿದೆ. ಈವರೆಗೆ ಒಟ್ಟು 650,32,93,436 ರೂ. ಬಿಡುಗಡೆಯಾಗಿದೆ’
-ಎಚ್.ಹರಿಪ್ರಸಾದ್ ಶೆಟ್ಟಿ, ಅಧ್ಯಕ್ಷರು, ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ






