ನೀಟ್ ಯುಜಿ ಫಲಿತಾಂಶ: ಉಡುಪಿ ಆಕಾಶ್ ಸಂಸ್ಥೆ 9 ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ; ಸನ್ಮಾನ

ಉಡುಪಿ : ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧಗೆ ವಿದ್ಯಾಥಿಗಳಿಗೆ ತರಬೇತಿ ನೀಡುವ ದೇಶದ ಪ್ರಮುಖ ಸಂಸ್ಥೆ ಯಾದ ಆಕಾಶ್ ಎಜ್ಯುಕೇಶನಲ್ ಸರ್ವಿಸಸ್ ಲಿಮಿಟೆಡ್‌ನ ಉಡುಪಿ ಶಾಖೆಯ 9 ಮಂದಿ ವಿದ್ಯಾರ್ಥಿಗಳು ಈ ಬಾರಿಯ ನೀಟ್ ಯುಜಿ 2026ರ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ್ದಾರೆ ಎಂದು ಅಕಾಡೆಮಿಕ್ ನಿರ್ದೇಶಕ ಶ್ಯಾಮಪ್ರಸಾದ್ ತಿಳಿಸಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಗರಿಷ್ಠ 720 ಅಂಕಗಳಲ್ಲಿ 630 ಅಂಕ ಗಳಿಸಿ ದೇಶದಲ್ಲಿ 3535ನೇ ರ್ಯಾಂಕ್ ಪಡೆದಿರುವ ಉಡುಪಿಯ ಸಮನ್ವಿ ಮಯ್ಯ ಅವರನ್ನು ಸನ್ಮಾನಿಸಿ ಅವರು ಮಾತನಾಡುತಿದ್ದರು. ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಹಾಗೂ ಸಂಸ್ಥೆಯ ಶೈಕ್ಷಣಿಕ ಮಾರ್ಗದರ್ಶನ ಈ ಯಶಸ್ಸಿಗೆ ಕಾರಣ ಎಂದವರು ತಿಳಿಸಿದರು.
ಉಡುಪಿ ಶಾಖೆಯಲ್ಲಿ ಸಮನ್ವಿ ಮಯ್ಯ 630 ಅಂಕಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಉಳಿದಂತೆ ಪಂಚಮಿ ಎಂ.ಎಸ್. (581), ಮಹಮ್ಮದ್ ತಾಲ್ಲಾ (565), ನರೇಂದ್ರ ಎಸ್. ಪ್ರಭು (535), ದೇವ್ ಶರ್ಮಾ (528), ಗ್ರಾಜಿಯಾ ಮಾರಿಯಾ ಬೆನ್ಸನ್ (525), ದಿವ್ಯಂ ಹಿತೇಶ್ ಶಾಹ (515), ಅನ್ವೇಷಾ ಜಿ. ಪಾಟೀಲ್ (501) ಮತ್ತು ಆಯಿಷಾ ಫತೇಅಲಿ ಉಪ್ಪಿನ್ (501) ಉನ್ನತ ಸ್ಥಾನ ಗಳಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಆಕಾಶ್ ಸಂಸ್ಥೆಯ 4 ವಿದ್ಯಾರ್ಥಿಗಳು ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.
ತಮ್ಮ ಯಶಸ್ಸಿಗೆ ಆಕಾಶ್ ಸಂಸ್ಥೆಯ ನಿಯಮಿತ ಅಣಕು ಪರೀಕ್ಷೆಗಳು, ಸಂದೇಹ ಪರಿಹಾರ ಸೆಶನ್‌ಗಳು ಮತ್ತು ಪೋಷಕರು-ಉಪನ್ಯಾಸಕರ ನಿರಂತರ ಬೆಂಬಲವೇ ಕಾರಣ ಎಂದು ವಿದ್ಯಾರ್ಥಿಗಳು ಸಂತಸ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಶಿಸ್ತು ಮತ್ತು ಸ್ಥಿರತೆಯನ್ನು ಆಕಾಶ್ ಅಕಾಡೆಮಿಕ್ಸ್ ಮುಖ್ಯಸ್ಥ ಹಾಗೂ ಬ್ಯುಸಿನೆಸ್ ಹೆಡ್ ಧೀರಜ್ ಕುಮಾರ್ ಮಿಶ್ರಾ ಶ್ಲಾಘಿಸಿದರು.
ವಿದ್ಯಾರ್ಥಿಗಳ ಸಾಧನೆಯನ್ನು ಸಂಭ್ರಮಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಖಾ ಮುಖ್ಯಸ್ಥರಾದ ಪರಮೇಶ್ವರ್, ವೈದ್ಯಕೀಯ ವಿಭಾಗದ ಶೈಕ್ಷಣಿಕ ಮುಖ್ಯಸ್ಥರಾದ ಪ್ರದೀಪ ವಿ.ಸಾಮಗ, ಸಮನ್ವಿ ಮಯ್ಯ ಹಾಗೂ ತಂದೆ ಮಂಜುನಾಥ ಮಯ್ಯ ಉಪಸ್ಥಿತರಿದ್ದರು.






