ಕುದುರೆಮುಖ ಅರಣ್ಯದಲ್ಲಿ ಮರಗಳ್ಳತನಕ್ಕೆ ಯತ್ನ: 9ಕ್ಕೂ ಅಧಿಕ ಮರಗಳಿಗೆ ಕೊಡಲಿ

ಕಾರ್ಕಳ, ಸೆ.12: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಮುಟ್ಲುಪಾಡಿ ಪಡು ದರ್ಖಾಸು ಬಳಿಯ ಮೀಸಲು ಅರಣ್ಯದ ಕುಮ್ಕಿ ಜಾಗದಲ್ಲಿ ದುಷ್ಕರ್ಮಿಗಳು ರಾಜಾರೋಷವಾಗಿ ಮರಗಳ್ಳತನಕ್ಕೆ ಯತ್ನಿಸಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಸುಮಾರು 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಕಿರಾಲು ಬೋಗಿ, ಹೆಬ್ಬಲಸು ಸೇರಿದಂತೆ 9ಕ್ಕೂ ಹೆಚ್ಚು ಬೃಹತ್ ಗಾತ್ರದ ಮರಗಳನ್ನು ಕಡಿದು, ಕ್ರೇನ್ ಮೂಲಕ ಲಾರಿಗೆ ತುಂಬಿಸಿ ಸಾಗಿಸಲು ಯತ್ನಿಸಿರುವುದು ಕಂಡು ಬಂದಿದೆ. ಮರಗಳನ್ನು ಕಡಿದು ಕ್ರೇನ್ ಮೂಲಕ ಲಾರಿಗೆ ತುಂಬಿಸುತ್ತಿದ್ದ ವೇಳೆ ಸ್ಥಳೀಯರು ಗಮನಿಸಿ ಆಕ್ಷೇಪ ವ್ಯಕ್ತಪಡಿಸಿದ್ದು, ಸಮರ್ಪಕ ದಾಖಲೆಗಳನ್ನು ತೋರಿಸಲು ವಿಫಲರಾದ ದುಷ್ಕರ್ಮಿಗಳು, ಕಡಿದ ಮರಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕುದುರೆಮುಖ ವನ್ಯಜೀವಿ ವಿಭಾಗದ ಕಳ್ಳಬೇಟೆ ತಡೆ ಶಿಬಿರದಿಂದ ಸುಮಾರು 700 ಮೀಟರ್ ಅಂತರದಲ್ಲೇ ಯಂತ್ರೋಪಕರಣಗಳನ್ನು ಬಳಸಿ ಹಲವು ಬೃಹತ್ ಮರಗಳನ್ನು ಕಡಿದು ಸಾಗಾಟಕ್ಕೆ ಸಿದ್ಧತೆ ನಡೆಸಲಾಗಿದ್ದರೂ, ಅರಣ್ಯ ಇಲಾಖೆಗೆ ಮುಂಜಾನೆ ಯಾವುದೇ ಮಾಹಿತಿ ದೊರೆಯದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ಸ್ಥಳದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಸಂಜೆ ವೇಳೆಗೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಕಡಿದು ಹಾಕಲಾಗಿದ್ದ ಮರಗಳನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಮರ ಸಾಗಾಟಕ್ಕೆ ಬಳಸಲು ಬಂದಿದ್ದ ಲಾರಿ ಹಾಗೂ ಕ್ರೇನ್‌ಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ಕಾರ್ಕಳ ಆರ್‌ಎಫ್‌ಓ ಅರುಣ್ ತಿಳಿಸಿದ್ದಾರೆ.






