ಯುಪಿಸಿಎಲ್‌ನ 900 ಎಕರೆ ಭೂಪ್ರದೇಶ ಮರು ಸ್ವಾಧೀನ: ಉಡುಪಿ ಡಿಸಿ ವಿದ್ಯಾಕುಮಾರಿ
ಲೀನ್ ಯೋಜನೆ, ಝಡ್‌ಇಡಿ, ರಫ್ತು ಕುರಿತು ಅರಿವು ಕಾರ್ಯಾಗಾರ

ಉಡುಪಿ, ಫೆ.27: ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್‌ನ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರದ ಎರಡನೇ ಹಂತದ ವಿಸ್ತರಣೆಗಾಗಿ ಅದಾನಿ ಪವರ್ಸ್‌ಗೆ ನೀಡಲಾಗಿರುವ 900 ಎಕರೆ ಜಾಗವನ್ನು ಮರು ಸ್ವಾಧೀನ ಪಡಿಸಿಕೊಂಡು ಸಣ್ಣ ಕೈಗಾರಿಕಾ ವಸಾಹತು ರೂಪಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕರ್ನಾಟಕ ಸರಕಾರ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿಟಿಪಿಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸ್ಸಿಯಾ) ಇವುಗಳ ಸಹಯೋಗದಲ್ಲಿ ಎಂಎಸ್‌ಎಂಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ಆರ್‌ಎಎಂಪಿ) ಯೋಜನೆಯಡಿ ಯಲ್ಲಿ ಲೀನ್ ಯೋಜನೆ ಮತ್ತು ಝಡ್‌ಇಡಿ ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕಡಿಯಾಳಿಯ ದಿ ಓಷನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯುಪಿಸಿಎಲ್ ವಿಸ್ತರಣೆಗಾಗಿ ಕೆಐಎಡಿಬಿ ಎಲ್ಲೂರು ಹಾಗೂ ಸಾಂತೂರು ಗಳಲ್ಲಿ ಈಗಾಗಲೇ ಭೂಸ್ವಾಧೀನಪಡಿಸಿ ಕೊಂಡಿರುವ 945 ಎಕರೆ ಪ್ರದೇಶ ವನ್ನು ಅದಾನಿ ಪವರ್ಸ್ ಬಳಕೆ ಮಾಡದೇ ಇರುವುದರಿಂದ ಅದನ್ನು ಮರುಸ್ವಾಧೀನ ಪಡಿಸಿಕೊಂಡು ಕೈಗಾರಿಕಾ ವಸಾಹತು ಸ್ಥಾಪನೆಗೆ ಬಳಸುವ ಚಿಂತನೆ ನಡೆಯುತ್ತಿದೆ ಎಂದವರು ಹೇಳಿದರು.
ಜಿಲ್ಲೆಯಲ್ಲಿ ಸರಕಾರಿ ಜಮೀನಿನ ಲಭ್ಯತೆ ಕಡಿಮೆ ಇದೆ. ಸಣ್ಣ ಕೈಗಾರಿಕೆಗಳಿಗೆ ಭೂಮಿ ಪಡೆದುಕೊಂಡವರು ಅದನ್ನು ಸರಿ ಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಹೊಸದಾಗಿ ಕೈಗಾರಿಕೆಗಳನ್ನು ಆರಂಭಿಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೊಸ ಜಾಗದ ಪರಿಶೀಲನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹೆಬ್ರಿಯ ಶಿವಪುರ-ಕರಿಬೆಟ್ಟುಗಳಲ್ಲಿ 113 ಎಕರೆ ಕಾದಿರಿಸಿದ್ದು, 70 ಎಕರೆಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಅದೇ ರೀತಿ ನಿಟ್ಟೆಯಲ್ಲಿ 50 ಎಕರೆ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಉಪ್ಪೂರಿನಲ್ಲಿ 101 ಎಕರೆ ಖಾಸಗಿಯವರ ಜಮೀನನ್ನು ಗುರುತಿಸಲಾಗಿದೆ ಎಂದರು.
ಉತ್ತೇಜನಕ್ಕೆ ಕ್ರಮ: ಸಣ್ಣ ಕೈಗಾರಿಕಾ ಉದ್ಯಮಗಳನ್ನು ಉತ್ತೇಜಿಸಲು ಸರಕಾರ ಸದಾ ಬದ್ಧವಾಗಿದೆ. ಸರಕಾರ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಹಲವು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಉದ್ದಿಮೆದಾರರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆ ಉದ್ದಿಮೆಗಳನ್ನು ಇನ್ನಷ್ಟು ಸ್ಥಾಪಿಸುವ ಮೂಲಕ ಸ್ಥಳಿಯರಿಗೆ ಉದ್ಯೋಗ ದೊರಕಿಸಲು ಮುಂದಾಗಬೇಕು. ಉದ್ಯುಗಳಿಗೆ ಅಗತ್ಯರುವ ಎಲ್ಲಾ ರೀತಿಯ ಸಹಕಾರವನ್ನು ಕೊಡಲು ಸರಕಾರ ಬದ್ಧವಾಗಿದೆ. ಸರಕಾರದ ಯೋಜನೆಗಳ ಪ್ರಯೋಜನ ಪಡೆದುಕೊಂಡು ಸ್ವಯಂ ಉದ್ಯೋಗ ಸ್ಥಾಪನೆ ಮಾಡಿ, ಮತ್ತಷ್ಟು ಜನರಿಗೆ ಕೆಲಸ ನೀಡಲು ಮುಂದೆ ಬರಬೇಕು ಎಂದರು.
ಹೊಸ ಕೈಗಾರಿಕೆಗಳನ್ನು ಸಾಕಷ್ಟು ಶ್ರಮ ವಹಿಸಿ ಪ್ರಾರಂಭಿಸಲಾಗಿರುತ್ತದೆ. ಕೈಗಾರಿಕೆಗಳಲ್ಲಿ ತಾವು ತಯಾರಿಸುವ ವಸ್ತುವಿನಲ್ಲಿ ದೋಷವುಂಟಾದಾಗ ರಫ್ತು ಮಾಡಲು ಸಾಧ್ಯವಾಗುವುದಿಲ್ಲ. ವಸ್ತುಗಳನ್ನು ತಯಾರಿಸುವ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಅದರ ತ್ಯಾಜ್ಯ ವಸ್ತುಗಳು ನದಿ, ಸಮುದ್ರಕ್ಕೆ ಸೇರಿದಾಗ ಜಲಚರಗಳೊಂದಿಗೆ ಮನುಷ್ಯನಿಗೂ ಸಹ ಹಾನಿಯುಂಟಾಗುತ್ತದೆ. ಇದನ್ನು ನಿಭಾಯಿಸುವ ಮಾಹಿತಿ ಪಡೆದು ಕೊಳ್ಳಬೇಕು ಎಂದರು.
ಜಿಲ್ಲೆಯ ವಿದ್ಯಾವಂತ ಯುವಕರು ಉದ್ಯೋಗಕ್ಕಾಗಿ ದೇಶದ ವಿವಿಧೆಡೆ ನಗರಗಳಿಗೆ, ವಿದೇಶಗಳಿಗೆ ವಲಸೆ ಹೋಗುತ್ತಿ ದ್ದಾರೆ. ಅವರಿಗೆ ಇಲ್ಲಿಯೇ ಉದ್ಯೋಗಾವಕಾಶ ದೊರೆತಲ್ಲಿ ಕುಟುಂಬದವರೊಂದಿಗೆ ಇಲ್ಲಿಯೆ ನೆಲೆಕಂಡುಕೊಳ್ಳುತ್ತಾರೆ ಎಂದರು.
ಕಾಸಿಯಾ ಅಧ್ಯಕ್ಷ ಎಂ.ಜಿ. ರಾಜಗೋಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಲ್ಲಿ ಇತೀಚೆಗೆ ರಾಜ್ಯ ಸರಕಾರ ಜಾರಿಗೆ ತಂದಿರುವ ಇ-ಖಾತಾವು ಸಣ್ಣ ಕೈಗಾರಿಕೆಗಳಿಗೆ ಸಮಸ್ಯೆಯನ್ನುಂಟು ಮಾಡುತ್ತಿರುವುದನ್ನು ವಿವರಿಸಿದರು. ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ಗಳಿಲ್ಲದೇ ಯಾವುದೇ ನೋಂದಣಿ, ಮರು ನೋಂದಣಿ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಈಗಾಗಲೇ ಮುಖ್ಯಮಂತ್ರಿಗಳ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ಎಲ್ಲಾ ಸಮಸ್ಯೆಗಳನ್ನು ವಿವರಿಸಲಾಗಿದೆ. ಸಣ್ಣ ಕೈಗಾರಿಕೆಗಳಿಗೆ ಅಗತ್ಯವಿರುವ ನಿವೇಶನದ ಕೊರತೆ, ಹಾಲಿ ಕೈಗಾರಿಕಾ ಪ್ರದೇಶಗಳ ಮೂಲಭೂತ ಸೌಕರ್ಯ ಗಳ ಅಭಿವೃದ್ಧಿ, ಗ್ರಾಚ್ಯುಟಿ, ಕನಿಷ್ಠ ವೇತನ ಜಾರಿಯ ಮರು ಪರಿಶೀಲನೆ, ಸೇರಿದಂತೆ ಅನೇಕ ಸಮಸ್ಯೆಗಳು ಸಣ್ಣ ಕೈಗಾರಿಕೋದ್ಯಮಗಳಿಗೆ ಇವೆ. ಇವುಗಳನ್ನು ಆದ್ಯತೆಯ ಮೇಲೆ ಪರಿಹರಿಸಿಕೊಡಬೇಕು ಎಂದರು.
ಕಾರ್ಯಾಗಾರದಲ್ಲಿ ರಫ್ತು ಕುರಿತು ಸತೀಶ್ ಕೋಟ, ಝಡ್.ಇ.ಡಿ ಯೋಜನೆ ಕುರಿತು ರೇಣುಕಾ ಹಾಗೂ ಲೀನ್ ಯೋಜನೆ ಕುರಿತು ಡಾ. ಎಸ್.ಎಂ ಜಗದೀಶ್ ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ಐಇಡಿಎಸ್ ಜಂಟಿ ನಿರ್ದೇಶಕ ಡಾ. ಕೆ ಸಾಕ್ರೇಟಿಸ್, ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್ ಕುಂದರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ನಾಯಕ್, ವಿಟಿಪಿಸಿ ಮಂಗಳೂರು ವಿಭಾಗದ ಉಪನಿರ್ದೇಶಕ ಮಂಜುನಾಥ್ ಹೆಗಡೆ, ಕಾಸಿಯಾ ಉಪಾಧ್ಯಕ್ಷ ಗಣೇಶ್ ರಾವ್ ಬಿ.ಆರ್, ಖಜಾಂಜಿ ಮಂಜುನಾಥ್ ಹೆಚ್. ಉಪಸ್ಥಿತರಿದ್ದರು.
ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್ ಸಾಗರ್ ನಿರೂಪಿಸಿ, ವಂದಿಸಿದರು.
ಜಿಲ್ಲೆಯಲ್ಲಿ 1,32,000 ಮಂದಿಗೆ ಉದ್ಯೋಗ
ಉಡುಪಿ ಜಿಲ್ಲೆಯಲ್ಲಿ ಸುಮಾರು 12,500 ಸಣ್ಣ ಕೈಗಾರಿಕೆಗಳು ಕಾರ್ಯಾಚರಿಸುತ್ತಿವೆ. 47ರಿಂದ 50ರಷ್ಟು ಮಧ್ಯಮ ಕೈಗಾರಿಕೆಗಳಿವೆ. ಅಲ್ಲದೇ 7 ಬೃಹತ್ ಕೈಗಾರಿಕೆಗಳು ಇಲ್ಲಿ ಕಾರ್ಯನಿರ್ವಸುತ್ತಿವೆ. ಜಿಲ್ಲೆಯ ಸುಮಾರು 1,32,000 ಮಂದಿ ಎಂ.ಎಸ್.ಎಂ.ಇ ಗಳಲ್ಲಿ ಕೆಲಸ ಮಾಡುತಿದ್ದಾರೆ. ಇದು ಅವರುಗಳಿಗೆ ಜೀವನಾಧಾರವಾಗಿದೆ ಎಂದು ಡಾ.ವಿದ್ಯಾಕುಮಾರಿ ತಿಳಿಸಿದರು.
ಎಂಎಸ್‌ಎಂಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಅದನ್ನು ಲಾಭದಾ ಯಕವಾಗಿ ನಡೆಸಲು ಯೋಜನೆಯನ್ನು ರೂಪಿಸ ಬೇಕು. ಇವುಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲದಂತೆ, ಅವುಗಳಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ (ಝೀರೋ ಡಿಫೆಕ್ಟ್, ಝೀರೋ ಎಫೆಕ್ಟ್) ಮುಂದುವ ರೆಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿದೆ. ಕೈಗಾರಿಕೋದ್ಯಮಿ ಗಳ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಮಟ್ಟದಲ್ಲಿರುವ ಎಂಟು ಸಮಿತಿಗಳ ಸಭೆಗಳನ್ನು ನಿರಂತರವಾಗಿ ನಡೆಸಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲಾಗುತ್ತಿದೆ ಎಂದರು.







