‘ಸೇವಾ ಸಂಕಲ್ಪ’ ಕಾರ್ಯಕ್ರಮ: 93.64 ಲಕ್ಷ ರೂ. ಮೌಲ್ಯದ ನೆರವು ವಿತರಣೆ

ಕುಂದಾಪುರ, ಜೂ.14: ಬ್ರಹ್ಮಾವರ ವಂಡಾರು ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಮತ್ತು ಶ್ರೀಕೃಷ್ಣಪ್ರಸಾದ ಫೌಂಡೇಶನ್ ವತಿಯಿಂದ ಕೋಟೇಶ್ವರದ ಯುವ ಮೆರಿಡಿಯನ್ ಗ್ರಾಮ್ಮಿ ಬಾಲ್ರೂಮ್‌ನಲ್ಲಿ ರವಿವಾರ ಆಯೋಜಿ ಸಲಾದ ‘ಸೇವಾ ಸಂಕಲ್ಪ’ ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.
ಕುಂದಾಪುರ ಶಾಸಕ ಎ.ಕಿರಣ್ ಕುರ್ಮಾ ಕೊಡ್ಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಶ್ರೀಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಚೇರ್ಮನ್ ಸಂಪತ್ ಶೆಟ್ಟಿ ವಹಿಸಿದ್ದರು. ಇದೇ ಸಂದರ್ಭ 6 ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ, ಅದುರೋ ಫೌಂಡೇಶನ್ ಮೂಲಕ ಬಡ ಕುಟುಂಬದ ವಿದ್ಯಾಭ್ಯಾಸಕ್ಕೆ ಮತ್ತು ವೈದ್ಯಕೀಯ ಕ್ಯಾಂಪ್‌ಗೆ ಸಹಾಯಧನ ನೀಡಲಾಯಿತು.
2025-26ನೇ ಸಾಲಿಗೆ ಬಡ ಕುಟುಂಬದಿಂದ ಬಂದ 5 ವಿದ್ಯಾರ್ಥಿಗಳ ದತ್ತು ಸ್ವೀಕಾರ ಮತ್ತು 2026-27ನೇ ಸಾಲಿಗೆ 14 ವಿದ್ಯಾರ್ಥಿಗಳ ದತ್ತು ಸ್ವೀಕಾರ, ವಿದ್ಯಾರ್ಥಿ ವೇತನ ವಿತರಣೆ, ವಂಡಾರು ಮತ್ತು ಸಾಬ್ರಕಟ್ಟೆ ಶಾಲೆಯ ಅತಿಥಿ ಶಿಕ್ಷಕರ ವೇತನ ಪಾವತಿ, ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ನೆರವು, ಕುಂದಾಪುರ ಬಿ.ಬಿ.ಹೆಗ್ಡೆ ಕಾಲೇಜಿಗೆ 50 ಕಂಪ್ಯೂಟರ್ ವಿತರಣೆ, ವೈದ್ಯಕೀಯ ಸಹಾಯಧನ ಮತ್ತು ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ಮತ್ತು ಕೊಡೆ ವಿತರಣೆ ಸೇರಿದಂತೆ ಸುಮಾರು 93.64 ಲಕ್ಷ ಮೌಲ್ಯದ ನೆರವನ್ನು ವಿತರಿಸಲಾಯಿತು.
ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ, ಕುಂದಾಪುರ ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಡಾ.ಉಮೇಶ ಶೆಟ್ಟಿ ಕೊತ್ತಾಡಿ, ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರ್, ಯುವ ಮೆರಿಡಿಯನ್‌ನ ಆಡಳಿತ ನಿರ್ದೇಶಕರಾದ ಬಿ.ಉದಯಕುಮಾರ್ ಶೆಟ್ಟಿ ಮತ್ತು ಬಿ.ವಿನಯ ಕುಮಾರ್ ಶೆಟ್ಟಿ, ಕುಂದಾಪುರದ ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಪತ್ರಕರ್ತ ರಾಜೇಶ ಕೆ.ಸಿ., ಸೋನಾಲಿ ಎಸ್.ಶೆಟ್ಟಿ ಉಪಸ್ಥಿತರಿದ್ದರು.
ಎಳ್ಳಂಪಳ್ಳಿ ಸಂತೋಷ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀನಿವಾಸ ಶೆಟ್ಟಿ ವಂದಿಸಿದರು.






