ವಿಶ್ವದಲ್ಲಿ ಪೊಲೀಯೋ ಶೇ.99.9ರಷ್ಟು ನಿವಾರಣೆ: ಡಾ.ಶರತ್ ರಾವ್

ಮಣಿಪಾಲ ಅ.25: ಇಂದು ಭಾರತದಲ್ಲಿ ಪೋಲಿಯೋ ನಿರ್ಮೂಲನೆ ಆಗಿದೆ. ವಿಶ್ವದಲ್ಲಿ ಶೇ.99.9 ನಿವಾರಣೆ ಯಾಗಿದೆ. ರೋಟರಿಯಂತಹ ಸಾರ್ವಜನಿಕ ಸಂಘಟನೆಯ ಶಾಶ್ವತವಾದ ದೃಢತೆ, ಬದ್ಧತೆ, ಸಮುದಾಯದ ಸಾಸ್ಥಕ್ಕಾಗಿ ಅವರ ಪರಿಶ್ರಮದಿಂದ ಇಂತಹ ಒಂದು ಅದ್ವಿತೀಯ ಸಾಧನೆ ವಿಶ್ವದಲ್ಲಾಗಿದೆ ಎಂದು ಮಣಿಪಾಲದ ಆಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೊ-ವೈಸ್ ಚಾನ್ಸಲರ್ ಡಾ.ಶರತ್ ರಾವ್ ಹೇಳಿದ್ದಾರೆ.
ರೋಟರಿ ಉಡುಪಿ ಮತ್ತು ರೋಟರಿ ಕ್ಲಬ್ ಮಣಿಪಾಲ ಟೌನ್, ರೋಟರ್ಯಾಕ್ಟ್ ಕ್ಲಬ್ ಉಡುಪಿ ಮತ್ತು ಕೆಎಂಸಿ ಮಣಿಪಾಲ ಜಂಟಿಯಾಗಿ ವಿಶ್ವ ಪೋಲಿಯೋ ದಿನಾಚರಣೆಯ ಅಂಗವಾಗಿ ಮಣಿಪಾಲದಲ್ಲಿ ಗುರುವಾರ ಹಮ್ಮಿಕೊ ಳ್ಳಲಾದ ವಾಕಥಾನ್ ಪೋಲಿಯೋ ಕಾಲ್ನಡಿಗೆ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸುಬ್ರಹ್ಮಣ್ಯ ಬಾಸ್ರಿ ರಚಿಸಿದ ‘ಎಂಡ್ ಪೋಲಿಯೋ ನೌ’ ಕುರಿತಾಗಿ ಮಾಹಿತಿ ಪುಸ್ತಿಕೆಯನ್ನು ಬಿಡುಗಡೆಗೊಳಿಸಿದ ಉಡುಪಿ ಜಿಲ್ಲಾ ಪಂಚಾಯಾತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತೀಕ ಬಾಯಲ್ ಮಾತನಾಡಿ, ಪೋಲಿಯೋ ಎಂಬ ಮಾರಕ ಕಾಯಿಲೆಯ ನಿರ್ಮೂ ಲನೆಯು, ಸಂಘಟಿತ ಪ್ರಯತ್ನದಿಂದ ಅಸಾಧಾರಣ ಕಾಯಕಗಳನ್ನು ಸುಲಭವಾಗಿ ಸಾಧಿಸಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ತಿಳಿಸಿದರು.
ಇಂದು ನಮ್ಮ ಜವಾಬ್ದಾರಿಯು ಇಂದಿಗೇ ಮುಗಿದಿಲ್ಲ. ವಿಶ್ವದಿಂದ ಪೋಲಿಯೋ ಸಂಪೂರ್ಣ ನಿರ್ಮೂಲನವಾಗು ವವರೆಗೆ ನಮಗೆ ವಿಶ್ರಾಂತಿ ಇಲ್ಲ, ಈ ನೆಲೆಯಲ್ಲಿ ಪೋಲಿಯೋ ದಿನಾಚರಣೆ ಆಚರಣೆಯ ನೆಪದಲ್ಲಿ ಕಾಲ್ನಡಿಗೆ ಜಾಗೃತಿ ಜಾಥಾ, ಬೀದಿ ನಾಟಕ, ಪೋಲಿಯೋ ನಿಧಿ ಸಂಗ್ರಹ ಅಭಿಯಾನವು ಪೋಲಿಯೋ ಮುಕ್ತ ವಿಶ್ವದ ಇತಿಹಾಸವನ್ನು ನಿರ್ಮಿಸಲು ನಮಗೆ ಅತ್ಯಂತ ಸಹಕಾರಿ ಎಂದು ಅವರು ಹೇಳಿದರು.
ಮಾಹೆ ಮಣಿಪಾಲದ ಇಂಟರ್ಯಾಕ್ಟ್ ಭವನದ ಬಳಿ ವಾಕಥಾನ್, ಕಾಲ್ನಡಿಗೆ ಜಾಥಾಕ್ಕೆ ರೋಟರಿ ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ ಹಸಿರು ನಿಶಾನೆ ತೋರಿದರು. ಪೋಲಿಯೋ ಪ್ಲಸ್ ಸಭಾಪತಿ ಸುಬ್ರಹ್ಮಣ್ಯ ಬಾಸ್ರಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ರೋಟರಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಅಮಿತ್ ಅರವಿಂದ್, ಜಿಲ್ಲಾ ರೋಟರಿ ಪಬ್ಲಿಕ್ ಇಮೇಜ್ ಉಪ ಸಭಾಪತಿ ರೇಖಾ ಉಪಾಧ್ಯಾಯ, ವಲಯ ಪೋಲಿಯೋ ಪ್ಲಸ್ ಸಂಯೋಜಕ ಡಾ. ಪ್ರಭಾಕರ ರೆಂಜಾಳ್ ಉಪಸ್ಥಿತರಿದ್ದರು.
ಮಣಿಪಾಲದ ಅಧ್ಯಕ್ಷ ದೀಪಕ್ ರಾಮ್ ಬಾಯರಿ ಸ್ವಾಗತಿಸಿದರು, ರೋಟರಿ ಉಡುಪಿ ಅಧ್ಯಕ್ಷ ಸೂರಜ್ ಕುಮಾರ್ ವೈ. ವಂದಿಸಿದರು. ವಲಯ ಸೇನಾನಿ ಡಾ.ಶ್ರೀಧರ್ ಕಾರ್ಯಕ್ರಮ ನಿರ್ವಹಿಸಿದರು. ನಿತ್ಯಾನಂದ ನಾಯಕ್ ವಾಕಥಾನ್ ನಿರ್ವಹಣೆ ನಡೆಸಿಕೊಟ್ಟರು. ಜಾಥಾ ಮಾರ್ಗದಲ್ಲಿ ರೋಟರ್ಯಾಕ್ಟ್ ಕ್ಲಬ್, ಮುನಿಯಾಲು ಸಮೂಹ ಸಂಸ್ಥೆಗಳ ಸದಸ್ಯರು ಪೋಲಿಯೋ ನಿರ್ಮೂಲನ ಅಭಿಯಾನದ ಭಾಗವಾಗಿ ಬೀದಿ ನಾಟಕವನ್ನು ಪ್ರದರ್ಶಿಸಿದರು.







