ಜೂ.1ರಿಂದ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ಉಚಿತ ತಂಬಾಕು ವ್ಯಸನ ನಿವಾರಣಾ ಶಿಬಿರ

ಉಡುಪಿ, ಮೇ 30: ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ದೊಡ್ಡಣಗುಡ್ಡೆಯಲ್ಲಿರುವ ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ಜೂನ್ 1ರಿಂದ ಜೂನ್ 6ರವರೆಗೆ ಉಚಿತ ತಂಬಾಕು ವ್ಯಸನ ನಿವಾರಣಾ ಹೊರರೋಗಿ ಶಿಬಿರವನ್ನು ಆಯೋಜಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯ ಲಿರುವ ಈ ಶಿಬಿರದಲ್ಲಿ ಜರ್ದಾ, ಸಿಗರೇಟ್, ಗುಟ್ಕಾ, ನಶ್ಯ ಪುಡಿ, ಎಲೆ ಅಡಿಕೆ ತಂಬಾಕು, ಬೀಡಿ, ಹುಕ್ಕಾ ಹಾಗೂ ಪಾನ್ ಮಸಾಲಾ ಸೇವನೆಯಂತಹ ತಂಬಾಕು ವ್ಯಸನಗಳಿಂದ ಮುಕ್ತರಾಗಲು ಬಯಸುವವರಿಗೆ ಉಚಿತ ಸಲಹೆ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ತಂಬಾಕು ಸೇವನೆಯನ್ನು ತ್ಯಜಿಸುವ ಸಂದರ್ಭದಲ್ಲಿ ಮನಸ್ಸಿಗೆ ಕಿರಿಕಿರಿ, ಆತಂಕ, ಅಸಹನೆ, ನಿದ್ರಾಹೀನತೆ, ಏಕಾಗ್ರತೆಯ ಕೊರತೆ, ಹಸಿವು ಹೆಚ್ಚಾಗುವುದು, ತಲೆನೋವು ಸೇರಿದಂತೆ ವಿವಿಧ ಹಿಂದೆಗೆತ ಲಕ್ಷಣಗಳು ಕಂಡು ಬರಬಹುದು. ಆದರೆ ಸರಿಯಾದ ಚಿಕಿತ್ಸೆ, ಕೌನ್ಸೆಲಿಂಗ್ ಮತ್ತು ನಿರಂತರ ಬೆಂಬಲದ ಮೂಲಕ ಈ ವ್ಯಸನದಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವೆಂದು ತಜ್ಞರು ತಿಳಿಸಿದ್ದಾರೆ.
ಶಿಬಿರದಲ್ಲಿ ತಜ್ಞ ವೈದ್ಯರ ಸಲಹೆ, ಮನೋವೈದ್ಯಕೀಯ ಮಾರ್ಗದರ್ಶನ, ವ್ಯಸನ ನಿವಾರಣಾ ಕೌನ್ಸಲಿಂಗ್, ಆರೋಗ್ಯ ತಪಾಸಣೆ, ಕುಟುಂಬ ಸದಸ್ಯರಿಗೆ ಜಾಗೃತಿ ಮಾಹಿತಿ, ಪ್ರೇರಣಾತ್ಮಕ ಮಾರ್ಗದರ್ಶನವನ್ನು ನೀಡಲಾಗುವುದು.
ತಂಬಾಕು ಸೇವನೆಯು ಬಾಯಿ ಕ್ಯಾನ್ಸರ್, ಹೃದಯ ರೋಗಗಳು, ಉಸಿರಾಟದ ಸಮಸ್ಯೆಗಳು, ರಕ್ತದೊತ್ತಡ ಹೆಚ್ಚಳ ಹಾಗೂ ಹಲ್ಲು ಮತ್ತು ಬಾಯಿಗೆ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಇರುವು ದರಿಂದ ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದು ಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಅಲ್ಲದೆ ಆಸ್ಪತ್ರೆಯಲ್ಲಿ ಮಾನಸಿಕ ಕಾಯಿಲೆಗಳು ಹಾಗೂ ಸಾರಾಯಿ, ತಂಬಾಕು, ಗಾಂಜಾ ಸೇರಿದಂತೆ ವಿವಿಧ ಅಮಲು ಪದಾರ್ಥಗಳ ವ್ಯಸನ ವಿಮುಕ್ತಿ ಚಿಕಿತ್ಸೆಗೆ ಇಎಸ್‌ಐ ಸೌಲಭ್ಯವೂ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9242821515ನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ತಿಳಿಸಿದ್ದಾರೆ.






