ಆ.1ಕ್ಕೆ ವೀರಭದ್ರ ನಾಯಕ್ ಯಕ್ಷ ಸಾಧಕ ಪ್ರಶಸ್ತಿ ಪ್ರದಾನ

ಉಡುಪಿ, ಜು.28: ಇಂದ್ರಾಳಿಯ ಯಕ್ಷಗಾನ ಕೇಂದ್ರ, ಉಡುಪಿಯ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಕತ್ವ ದಲ್ಲಿ ಯಕ್ಷಗುರು ಮಟಪಾಡಿ ವೀರಭದ್ರ ನಾಯಕರ ಸ್ಮರಣಾರ್ಥ ನೀಡುವ ‘ಯಕ್ಷಸಾಧಕ ಪ್ರಶಸ್ತಿ-2026’ನ್ನು ಇದೇ ಆಗಸ್ಟ್ 1ರಂದು ಶನಿವಾರ ಸಂಜೆ 4:00ಗಂಟೆಗೆ ನಗರದ ಪುರಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರು ಈ ಬಾರಿಯ ಯಕ್ಷಸಾಧಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಮಾಹೆ ವಿವಿಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್, ಉದ್ಯಮಿ ಪುರುಷೋತ್ತಮ ಶೆಟ್ಟಿ, ಯಕ್ಷಗಾನ ಕೇಂದ್ರದ ಸಲಹಾಸಮಿತಿಯ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ, ಯಕ್ಷಗಾನ ಮೇಳದ ಯಜಮಾನರಾದ ವೈ. ಕರುಣಾಕರ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರಿಂದ ‘ತಾಮ್ರಧ್ವಜ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.




