10 ಲಕ್ಷ ರೂ. ಸಾಲ ಪಡೆದು ವಾಪಾಸ್ಸು ನೀಡದೆ ವಂಚನೆ: ಪ್ರಕರಣ ದಾಖಲು

ಉಡುಪಿ, ಜು.8: ಲಕ್ಷಾಂತರ ರೂ. ಸಾಲ ಪಡೆದು ವಾಪಾಸ್ಸು ನೀಡದೆ ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಬಲಪಾಡಿಯ ಸಜ್ಜನ್ ಶೆಟ್ಟಿ(34) ಎಂಬವರು ಉದ್ಯೋಗಕ್ಕಾಗಿ ಸಿದ್ದಾರ್ಥ ಶೆಟ್ಟಿ ಎಂಬಾತನ ಪರಿಚಯವಾಗಿದ್ದು ಅತನಿಂದ ಆತನ ತಂದೆ ಅಮರನಾಥ್ ಶೆಟ್ಟಿ, ತಾಯಿ ಚಂದ್ರಕಲಾ ಎ.ಶೆಟ್ಟಿ, ಮಲ್ಲಿಕಾ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ಸದಾಶಿವ ಶೆಟ್ಟಿಯ ಪರಿಚಯವಾಗಿತ್ತು. ಸಿದ್ದಾರ್ಥ ಶೆಟ್ಟಿಗೆ ಹಣದ ಅವಶ್ಯಕತೆ ಇದ್ದಾಗ ಆರೋಪಿಗಳೆಲ್ಲರು ಸಜ್ಜನ್ ಶೆಟ್ಟಿ ಬಳಿಗೆ ಬಂದು ಹಣ ನೀಡುವಂತೆ ಕೇಳಿಕೊಂಡರು. ಅದರಂತೆ 5 ತಿಂಗಳ ಒಳಗಾಗಿ ಸಾಲವನ್ನು ಮರಳಿ ಕೊಡುವುದಾಗಿ ನಂಬಿಸಿ 10,00,000ರೂ. ಹಣವನ್ನು ಪಡೆದುಕೊಂಡಿದ್ದರು.
ಸಜ್ಜನ್ ಶೆಟ್ಟಿ ಹಣವನ್ನು ವಾಪಾಸು ಕೇಳಿದಾಗ ಕಾರಣ ಕೊಟ್ಟು ತಪ್ಪಿಸಿಕೊಳ್ಳುತ್ತಿದ್ದರು. ಅರೋಪಿ ನೀಡಿದ ಚೆಕ್ ಕೂಡ ಬೌನ್ಸ್ ಆಗಿತ್ತು. ಈ ವಿಚಾರವನ್ನು ಅರೋಪಿಗಳಿಗೆ ತಿಳಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ. ಆರೋಪಿಗಳು ವಂಚನೆ ಮಾಡುವ ಉದ್ದೇಶದಿಂದಲೇ ಹಣವನ್ನು ಪಡೆದು ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.




