ಉಡುಪಿ: ನ.22ರಂದು 10 ಮಂದಿ ಸಾಧಕರಿಗೆ ಪ್ರೇರಣಾಶ್ರೀ ಪ್ರಶಸ್ತಿ ಪ್ರದಾನ

ಉಡುಪಿ: ಕಳೆದ ಅ.24ರಂದು ಕನ್ನಡ ಸಂಘ ಬಹರೇನ್‌ನಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ 10ನೇ ವಿಶ್ವದಾಖಲೆಯನ್ನು ಬರೆದ ಉಡುಪಿಯ ತನುಶ್ರೀ ಪಿತ್ರೋಡಿ ಅವರಿಗೆ ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ನ.22ರಂದು ಸೈಂಟ್ ಸಿಸಿಲಿಸ್ ಹೈಸ್ಕೂಲ್ ಸಭಾಂಗಣದಲ್ಲಿ ಅಪರಾಹ್ನ 3:00ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತದೆ.
ಇದೀಗ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ತನುಶ್ರೀ ಕೋಟ್ಯಾನ್ ಅವರು 2017ರಲ್ಲಿ ಆರನೇ ತರಗತಿ ವಿದ್ಯಾರ್ಥಿನಿಯಾಗಿರುವಾಗ ತನ್ನ ಮೊದಲ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಮೊದಲ ವಿಶ್ವದಾಖಲೆ ಬರೆದಿದ್ದರು. ಆ ಬಳಿಕ ಅವರು ಸತತವಾಗಿ 10 ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಬಹರೇನ್‌ನಲ್ಲಿ ನಡೆದ ಪ್ರದರ್ಶನದಲ್ಲಿ ಅವರು 50 ನಿಮಿಷಗಳ ಅವಧಿಯಲ್ಲಿ 333 ಆಸನಗಳನ್ನು ಪ್ರದರ್ಶಿಸುವ ಮೂಲಕ ತಾನೇ ಬರೆದ 43 ನಿಮಿಷಗಳಲ್ಲಿ 245 ಆಸನಗಳ ದಾಖಲೆಯನ್ನು ಉತ್ತಮ ಪಡಿಸಿದ್ದರು. ಇದೀಗ ಅವರಿಗೆ ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ನ.22ರಂದು ವಿತರಿಸಲಾಗುತ್ತದೆ ಎಂದು ತನುಶ್ರೀ ಅವರ ತಂದೆ ಉದಯಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಡುಪಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ 10 ಮಂದಿ ಸಾದಕರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು. ಶಾಸಕ ಯಶಪಾಲ್ ಸುವರ್ಣ ಅವರನ್ನು ಸಾಧಕರನ್ನು ಗೌರವಿಸಲಿದ್ದಾರೆ ಎಂದೂ ಅವರು ಹೇಳಿದರು.
ಪ್ರೇರಣಾಶ್ರೀ ಸಾಧಕರಲ್ಲಿ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಸಂಗೀತ ಗುರು ವಿದ್ವಾನ್ ಮಧೂರು ಪಿ.ಬಾಲಸುಬ್ರಹ್ಮಣ್ಯಂ, ಮತ್ಸೋದ್ಯಮಿ ಸಾಧು ಸಾಲ್ಯಾನ್ ಮಲ್ಪೆ, ಸಮಾಜ ಸೇವಕ ನಿತ್ಯಾನಂದ ಒಳಕಾಡು, ಯೋಗ ಶಿಕ್ಷಕಿ ಅಖಿಲಾ ಶೆಟ್ಟಿ, ಪ್ರಕಾಶ್ ಅಂದ್ರಾದೆ, ರಕ್ತದಾನಿ ರಾಕೇಶ್ ಸುವರ್ಣ ಬೊಳ್ಜೆ ಮುಂತಾದವರು ಸೇರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತನುಶ್ರೀ ಪಿತ್ರೋಡಿ, ರಾಘವೇಂದ್ರ ದೇವಾಡಿಗ, ವಿಜಯ ಕೋಟ್ಯಾನ್ ಪಿತ್ರೋಡಿ ಉಪಸ್ಥಿತರಿದ್ದರು.







