100 ಕಿಂಡಿ ಅಣೆಕಟ್ಟಿಗೆ ಅ.20ರೊಳಗೆ ಹಲಗೆ ಅಳವಡಿಸಲು ಸೂಚನೆ; ಕುಡಿಯುವ ನೀರಿನ ಸಮಸ್ಯೆ ತಡೆಯಲು ಟಾಸ್ಕ್ ಫೋರ್ಸ್ ಸಮಿತಿ ಸಭೆ

ಉಡುಪಿ, ಅ.9: ಉಡುಪಿ ವಿಧಾನಸಭಾ ಕ್ಷೇತ್ರದ ಉಡುಪಿ ಮತ್ತು ಬ್ರಹ್ಮಾವರ ತಾಲೂಕು ಪಂಚಾಯತ್ ವ್ಯಾಪ್ತಿಯ 2026-27ನೇ ಸಾಲಿನ ಬೇಸಿಗೆ ಅವಧಿಯಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಸಮಸ್ಯೆ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಕ್ಕಾಗಿ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ಉಡುಪಿ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಉಡುಪಿ ವಿಧಾನಸಭಾ ಕ್ಷೇತ್ರದ ಉಡುಪಿ ತಾಲೂಕಿನ ಆರು ಮತ್ತು ಬ್ರಹ್ಮಾವರ ತಾಲೂಕಿನ 13 ಗ್ರಾಪಂ ವ್ಯಾಪ್ತಿಯಲ್ಲಿ ಈ ಬಾರಿ ಶೇ.40 ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜನವರಿಯಲ್ಲಿ ಕರೆಯಬೇಕಾದ ಸಭೆಯನ್ನು ಅಕ್ಟೋಬರ್‌ನಲ್ಲಿಯೇ ಕರೆಯ ಲಾಗಿದೆ ಎಂದು ತಿಳಿಸಿದರು.
ಈ ಮಧ್ಯೆ ಚುನಾವಣೆ ಘೋಷಣೆಯಾದರೆ ನೀತಿ ಸಂಹಿತೆಯಿಂದ ಕುಡಿಯುವ ನೀರಿಗೆ ಸಂಬಂಧಿಸಿ ಟೆಂಡರ್ ಕರೆಯಲು ಕೂಡ ತೊಂದರೆಯಾಗುವುದರಿಂದ ಈಗಾಲೇ ಸಭೆ ಕರೆದು ಚರ್ಚಿಸಲಾಗಿದೆ. ಅದಕ್ಕೆ ಟ್ಯಾಂಕರ್ ನೀರು, ಬಾವಿಗಳ ದುರಸ್ತಿ ಹಾಗೂ ಪಂಪ್‌ಸೆಟ್ ವ್ಯವಸ್ಥೆಗಳ ಕುರಿತು ಟೆಂಡರ್ ಕರೆದು ವರ್ಕ್ ಆಡರ್ ನೀಡಿ ಈಗಲೇ ಸಿದ್ಧ ಪಡಿಸಿ ಇಡಲಾಗುತ್ತದೆ ಎಂದು ಅವರು ಹೇಳಿದರು.
ಸಾಮಾನ್ಯವಾಗಿ ಕಿಂಡಿ ಅಣೆಕಟ್ಟುಗಳಿಗೆ ಡಿಸೆಂಬರ್ ತಿಂಗಳಲ್ಲಿ ಹಲಗೆ ಹಾಕಿ ನೀರು ಸಂಗ್ರಹ ಮಾಡಲಾಗುತ್ತದೆ. ಆದರೆ ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಅ.20ರೊಳಗೆ ಕ್ಷೇತ್ರ ವ್ಯಾಪ್ತಿಯಲ್ಲಿರುವ 100 ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕಲು ಕ್ರಮ ಕೈಗೊಳ್ಳಬೇಕು. ಸ್ಥಳ ಪರಿಶೀಲನೆ ನಡೆಸಿ, ಸ್ಥಳೀಯ ಅನುಭವ ಪಡೆದು ಕೊಳ್ಳಬೇಕು ಮತ್ತು ಹಲಗೆ ತುಂಡಾಗಿದ್ದರೆ ಹೊಸ ಹಲಗೆ ಅಲವಡಿಸಲು ಟೆಂಡರ್ ಕರೆಯಬೇಕು ಎಂದು ಶಾಸಕರು ಸಣ್ಣ ನೀರಾವರಿ ಇಲಾಖೆ ಇಂಜಿನಿಯರು ಹಾಗೂ ಪಿಡಿಓಗಳಿಗೆ ಸೂಚನೆ ನೀಡಿದರು.
ಕ್ಷೇತ್ರದ ಎಲ್ಲ 19 ಗ್ರಾಪಂಗಳಿಗೆ ನವೆಂಬರ್ 30ರಿಂದ ವಾರಾಹಿಯಿಂದ ನೀರು ಸರಬರಾಜು ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು. ಈ ಬಗ್ಗೆ ಸಂಬಂಧಪಟ್ಟವರಿಗೆ ತಕ್ಷಣ ನೀರು ಸರಬರಾಜು ಮಾಡುವಂತೆ ಮನವಿ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಸದ್ಯಕ್ಕೆ ಎಲ್ಲೂ ನೀರಿನ ಸಮಸ್ಯೆ ಎದುರಾಗಿಲ್ಲ. ಬಾವಿ ಹೂಳೆತ್ತಲು, ಪಂಪ್‌ಸೆಂಟ್ ದುರಸ್ತಿ ಮಾಡಲು ಕ್ರಮಕ್ಕೆ ಸೂಚನೆ ನೀಡಲಾಗಿದೆ. ಅದೇ ರೀತಿ ಪ್ರತಿ ಗ್ರಾಪಂಗಳಲ್ಲಿ ಒಂದು ಪಂಪ್‌ಸೆಂಟ್‌ಗಳನ್ನು ಪರ್ಯಾಯವಾಗಿ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಟ್ಯಾಂಕರ್ ನೀರಿಗೆ ಎಲ್ಲ ಕಡೆ ಒಂದೇ ರೀತಿಯ ಟೆಂಡರ್ ಕರೆಯುವಂತೆ ಉಸ್ತುವಾರಿ ಸಚಿವರ ಸಭೆಲ್ಲಿ ಉಲ್ಲೇಖ ಮಾಡಲಾಗಿದೆ. ಅದರಂತೆ ನಿಯಮ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಯಶ್‌ಪಾಲ್ ಸುವರ್ಣ ಹೇಳಿದರು.
ಕ್ಷೇತ್ರ ವ್ಯಾಪ್ತಿಯ ಹಿನ್ನೀರು ಇರುವ ಗ್ರಾಪಂಗಳಲ್ಲಿ ಉಪ್ಪು ನೀರಿನ ಸಮಸ್ಯೆ ಪ್ರತಿವರ್ಷ ಎದುರಾಗುತ್ತದೆ. ಅದೇ ರೀತಿ ಕರ್ಜೆ ಭಾಗದಲ್ಲಿಯೂ ನೀರಿನ ಸಮಸ್ಯೆಗಳು ಎದುರಾಗುತ್ತದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳ ಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಉಡುಪಿ ತಹಶೀಲ್ದಾರ್ ಗುರುರಾಜ್, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಉಡುಪಿ ತಾಪಂ ಕಾರ್ಯನಿರ್ವ ಹರ್ಣಾಧಿಕಾರಿ ವಿಜಯ, ಬ್ರಹ್ಮಾವರ ತಾಪಂ ಪ್ರಭಾರ ಕಾರ್ಯನಿರ್ವ ಹಣಾಧಿಕಾರಿ ಕೆ.ಜಿ.ರಾಮ ದಾಸ್, ಪಿಡಿಓಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.






