ಅ.11-12ರಂದು ಬ್ರಹ್ಮಾವರದ ಕೃಷಿ ಮೇಳ-2025: 30ಕ್ಕೂ ಅಧಿಕ ಭತ್ತದ ತಳಿಗಳ ಪ್ರದರ್ಶನ

ಉಡುಪಿ, ಅ.9: ಕರಾವಳಿ-ಮಳೆನಾಡು ಭಾಗದ ರೈತರನ್ನು ವಿಶೇಷವಾಗಿ ಆಕರ್ಷಿಸುತ್ತಿರುವ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಆವರಣದಲ್ಲಿ ನಡೆಯುವ ವಾರ್ಷಿಕ ಕೃಷಿ ಮೇಳ-2025 ಈ ಬಾರಿ ಅ.11 ಮತ್ತು 12ರಂದು ನಡೆಯಲಿದ್ದು, ಎರಡು ದಿನಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ರೈತರು ಹಾಗೂ ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡುವ ನಿರೀಕ್ಷೆ ಹೊಂದಲಾಗಿದೆ ಎಂದು ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಹಾಗೂ ಹಿರಿಯ ವಿಜ್ಞಾನಿ ಡಾ.ಧನಂಜಯ ಬಿ. ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ರೈತರಿಗೆ ಕೃಷಿಯನ್ನು ಲಾಭದಾಯಕವಾಗಿ ಮಾಡುವ ನಿಟ್ಟಿನಲ್ಲಿ ಪೂರಕ ಮಾಹಿತಿ ನೀಡಲು ಹಲವು ಉಪಯುಕ್ತ ವಿಚಾರಗೋಷ್ಠಿ ಗಳನ್ನು ಆಯೋಜಿಸಲಾಗಿದೆ. ಈ ಬಾರಿ 200ಕ್ಕೂ ಅಧಿಕ ಮಳಿಗೆಗಳು ಕೃಷಿಗೆ ಸಂಬಂಧಿಸಿದ ಪ್ರದರ್ಶನದಲ್ಲಿ ಇರಲಿವೆ ಎಂದರು.
ಅಡಿಕೆ ಸೇರಿದಂತೆ ತೋಟಗಾರಿಕಾ ಬೆಳೆಗಳ ಲಾಭದಾಯಕ ನಿರ್ವಹಣೆ, ಕರಾವಳಿಗೆ ಭವಿಷ್ಯದ ಬೆಳೆಗಳು ಹಾಗೂ ತಾಂತ್ರಿಕತೆಗಳು, ಕರಾವಳಿಯಲ್ಲಿ ಸುಸ್ಥಿರ ಭತ್ತದ ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳು, ಗೇರು ಬೆಳೆ ಕುರಿತಂತೆ ವಿಚಾರಗೋಷ್ಠಿಗಳು ನಡೆಯಲಿದ್ದು ಹಿರಿಯ ವಿಜ್ಞಾನಿಗಳು, ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಗಳು, ಇಲಾಖೆಗಳ ಮುಖ್ಯಸ್ಥರು, ಪ್ರಗತಿಪರ ಕೃಷಿಕರು ಭಾಗವಹಿಸಿ ಅನುಭವ ಹಂಚಿಕೊಳ್ಳಲಿದ್ದಾರೆ ಎಂದು ಡಾ.ಧನಂಜಯ ತಿಳಿಸಿದರು.
ವಿಶೇಷ ಆಕರ್ಷಣೆ: ಕೃಷಿಗೆ ಸಂಬಂಧಿಸಿದಂತೆ ಇತ್ತೀಚಿನ ಸಂಶೋಧನೆಗಳ ಕುರಿತು ರೈತರಿಗೆ ಹಾಗೂ ಸಾರ್ವಜನಿ ಕರಿಗೆ ಮಾಹಿತಿ ನೀಡಲು ಹಲವು ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗಿದೆ. ಕೃಷಿ ಸಂಶೋಧನಾ ಕೇಂದ್ರ ಅಭಿವೃದ್ಧಿ ಪಡಿಸಿದ ಅಪರೂಪದ ಭತ್ತದ ತಳಿಗಳು ಸೇರಿದಂತೆ 30ರಿಂದ 40 ಭತ್ತದ ತಳಿಗಳ ಪ್ರದರ್ಶನವಿರುತ್ತದೆ. ಕೃಷಿಯಲ್ಲಿ ದ್ರೋಣ್ ಬಳಕೆ ಕುರಿತಂತೆ ಪ್ರಾತ್ಯಕ್ಷಿಕೆಯೂ ಇರಲಿದೆ ಎಂದು ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಶಂಕರ್ ಎಂ.ವಿವರಿಸಿದರು.
ಕಾಡುಪ್ರಾಣಿ ಹಾವಳಿ ನಿಯಂತ್ರಣ ಸಾಧನಗಳ ಪ್ರಾತ್ಯಕ್ಷಿಕೆ, ಕೃಷಿ ಪ್ರವಾಸೋದ್ಯಮ ಮಾಡೆಲ್ ಕುರಿತು ಮಾಹಿತಿ, ಕೇಂದ್ರದಲ್ಲಿ ಬರುವ ಚಿಟ್ಟೆ ಪಾರ್ಕ್, ಮಧುವನ ಹಾಗೂ ಜೇನು ಸಾಕಾಣಿಕೆ ಕುರಿತು ಸಮಗ್ರ ಮಾಹಿತಿ, ಜೇನುಪೆಟ್ಟಿಗೆ ಗಳ ಪ್ರದರ್ಶನ-ಮಾರಾಟ, ಹೈನುಗಾರಿಕೆಯಲ್ಲಿ ವಿಶೇಷ ಮೇವಿನ ಬೆಳೆಗಳ ಪ್ರಾತ್ಯಕ್ಷಿಕೆ, ತೋಟಗಾರಿಕಾ ಬೆಳೆಗಳ ಕಸಿಕಟ್ಟುವಿಕೆ, ಹೈನುಗಾರಿಕೆ, ಮೀನು ಸಾಕಾಣಿಕೆ, ಕುರಿ, ಆಡು, ಹಂದಿ, ಕೋಳಿ ಹಾಗೂ ಬಾತುಕೋಳಿ ಸಾಕಾಣಿಕೆ ಕುರಿತು ಪ್ರಾತ್ಯಕ್ಷಿಕೆಯೂ ಇರಲಿದೆ ಎಂದರು.
ಕೃಷಿಗೆ ಸಂಬಂಧಿಸಿದಂತೆ ಹೊಸ ಹೊಸ ಯಂತ್ರೋಪಕರಣಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಹಾಗೂ ಮಾರಾಟವೂ ಇಲ್ಲಿ ನಡೆಯಲಿದೆ. ಮೌಲ್ಯಾಧಾರಿತ ಆಹಾರ ಉತ್ಪನ್ನಗಳ ಕುರಿತು ಸಹ ಪ್ರಾತ್ಯಕ್ಷಿಕೆ, ಜೈವಿಕ ಅನಿಲ ಉತ್ಪಾದಕ ಘಟಕಗಳ ಸಹ ಎರಡು ದಿನಗಳ ಮೇಳದಲ್ಲಿ ಇರಲಿದೆ ಎಂದರು.
ಕೃಷಿ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅ.11ರ ಬೆಳಗ್ಗೆ 10:30ಕ್ಕೆ ಉದ್ಘಾಟಿಸಲಿದ್ದಾರೆ. ರಾಜ್ಯ ಕೃಷಿ ಸಚಿವ ಎನ್.ಚೆಲುವ ರಾಯ ಸ್ವಾಮಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲೆಯ ಶಾಸಕರು ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ವಹಿಸಲಿದ್ದಾರೆ ಎಂದು ಬ್ರಹ್ಮಾವರ ಡಿಪ್ಲೋಮಾ ಕೃಷಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ವಿ.ಸುಧೀರ್ ಕಾಮತ್ ತಿಳಿಸಿದರು.
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿಯು ಪ್ರತಿವರ್ಷ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ವಿವಿಧ ಸಂಸ್ಥೆ,ಗಳ ಸಹಯೋಗದೊಂದಿಗೆ ಕರಾವಳಿ ಸೇರಿ ದಂತೆ ಆಸುಪಾಸಿನ ಜಿಲ್ಲೆಗಳ ರೈತರ ಅನುಕೂಲಕ್ಕಾಗಿ ದೊಡ್ಡಮಟ್ಟದ ಈ ಕೃಷಿ ಮೇಳವನ್ನು ಆಯೋಜಿಸುತ್ತಿದ್ದು, ಇದು ಲಕ್ಷಾಂತರ ಮಂದಿ ರೈತರು ಹಾಗೂ ಕೃಷಿಕರನ್ನು ಪ್ರತಿವರ್ಷ ಆಕರ್ಷಿಸುತ್ತಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಆಯ್ದ ಪ್ರಗತಿಪರ ಕೃಷಿಕನ್ನು ಸನ್ಮಾನಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೃಷಿ ತಾಂತ್ರಿಕ ಕೈಪಿಡಿಗಳನ್ನು ಬಿಡುಗಡೆಗೊಳಿಸಲಾಗುತ್ತದೆ. ಈ ಬಾರಿ ಕೇಂದ್ರದ ಸಮಗ್ರ ಕೃಷಿ ಘಟಕಗಳ ಕ್ಷೇತ್ರ ಭೇಟಿಯನ್ನು ಆಯೋಜಿಸಲಾಗಿದೆ. ಇದರೊಂದಿಗೆ ರೈತರು ಹಾಗೂ ವಿಜ್ಞಾನಿಗಳ ನಡುವೆ ಮುಕ್ತ ಮುಖಾಮುಖಿ ಚರ್ಚೆಯನ್ನು ಸಹ ಆಯೋಜಿಸಲಾಗಿದೆ ಎಂದು ಡಾ.ಕಾಮತ್ ತಿಳಿಸಿದರು.







