ಉಡುಪಿ ಜಿಲ್ಲೆಗೆ ಹೊಸದಾಗಿ 12 ಕೆಪಿಎಸ್ ಮಂಜೂರು; ಎಡಿಬಿ ನೆರವಿನೊಂದಿಗೆ ಅಭಿವೃದ್ಧಿ: ಎಲ್ಲ ಶಾಲೆಗಳಿಗೆ ಏಕರೂಪ ವಿನ್ಯಾಸ

ಸಾಂದರ್ಭಿಕ ಚಿತ್ರ
ಉಡುಪಿ, ಜು.9: ಉಡುಪಿ ಜಿಲ್ಲೆಗೆ ಹೊಸದಾಗಿ 12 ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್)ಗಳು ಮಂಜೂರಾಗಿದೆ. ರಾಜ್ಯ ಸರಕಾರದ ಮಹತ್ವಾ ಕಾಂಕ್ಷೆಯ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನ ಆರ್ಥಿಕ ನೆರವಿನೊಂದಿಗೆ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಈ ಎಲ್ಲ ಶಾಲೆಗಳನ್ನು ಏಕರೂಪದ ವಿನ್ಯಾಸ ದೊಂದಿಗೆ ನಿರ್ಮಿಸಲಾಗುತ್ತಿದೆ.
ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲಾಗಿದ್ದು, ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ 9 ಕೆಪಿಎಸ್ ಶಾಲೆಗಳು ಕಾರ್ಯಾಚರಿಸುತ್ತಿವೆ. ಎಲ್ಕೆಜಿಯಿಂದ 12ನೇ ತರಗತಿಯವರೆಗೆ ಒಟ್ಟು 7,927 ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಬಜಗೋಳಿ, ಬೈಲೂರು, ಹೆಬ್ರಿ, ಉದ್ಯಾವರ, ರಾಜೀವನಗರ, ಒಳಕಾಡು, ಬೋರ್ಡ್ ಹೈಸ್ಕೂಲ್, ಮಣೂರು, ಬಸ್ರೂರು, ಅಮಾವಾಸ್ಯೆಬೈಲು, ಸಿದ್ದಾಪುರ, ಉಪ್ಪುಂದ ಸರಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಉನ್ನತೀ ಕರಣಗೊಳಿಸಲಾಗಿದೆ.
ಅತ್ಯಾಧುನಿಕ ಸೌಲಭ್ಯ: ಸಾಮಾನ್ಯವಾಗಿ ಸರಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಪ್ರೌಢಶಾಲೆ ಅಥವಾ ಪಿಯುಸಿಗಾಗಿ ಬೇರೆಡೆಗೆ ಹೋಗಬೇಕಾದ ಪರಿಸ್ಥಿತಿ ಇರುತ್ತದೆ. ಆದರೆ ಕೆಪಿಎಸ್ ಶಾಲೆಗಳಲ್ಲಿ ಎಲ್ಕೆಜಿ ಯಿಂದ ಹಿಡಿದು ದ್ವಿತೀಯ ಪಿಯುಸಿವರೆಗೆ ವಿದ್ಯಾರ್ಥಿಗಳು ಒಂದೇ ಕ್ಯಾಂಪಸ್ನಲ್ಲಿ ಕಲಿಯಲು ಅವಕಾಶ ಕಲ್ಪಿಸಲಾಗಿದೆ.
ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ 12 ಶಾಲೆಗಳೂ ಒಂದೇ ಮಾದರಿಯ ಸುಸಜ್ಜಿತ ತರಗತಿಗಳು, ಅತ್ಯಾಧುನಿಕ ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳು, ಗ್ರಂಥಾಲಯ ಹಾಗೂ ಆಟದ ಮೈದಾನವನ್ನು ಹೊಂದಲಿವೆ. ಇವುಗಳಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಈಗಾಗಲೇ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನ ಅಧಿಕಾರಿಗಳು ಜಿಲ್ಲೆಯಲ್ಲಿ ಸರ್ವೆ ಕಾರ್ಯ ನಡೆಸಿ ವರದಿಯನ್ನು ತಯಾರಿಸಿದ್ದಾರೆ.
ದಾಖಲಾತಿ ಹೆಚ್ಚಳ: ಆಂಗ್ಲ ಮಾಧ್ಯಮ ಹಾಗೂ ಖಾಸಗಿ ಶಾಲೆಗಳ ಪ್ರಭಾವದ ಮಧ್ಯೆ ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಯಶಸ್ಸು ಸಾಧಿಸಲಾಗಿದೆ.
2026-27ನೇ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ 9 ಪ್ರಮುಖ ಕೆಪಿಎಸ್ ಶಾಲೆಗಳಲ್ಲಿ 4,012 ಗಂಡು ಮಕ್ಕಳು ಮತ್ತು 3,915 ಹೆಣ್ಣು ಮಕ್ಕಳು ಪ್ರವೇಶ ಪಡೆದಿದ್ದಾರೆ. ದಾಖಲಾತಿಯಲ್ಲಿ ಬ್ರಹ್ಮಾವರ ಎಚ್ಆರ್ಎಸ್ ಕರ್ನಾಟಕ ಪಬ್ಲಿಕ್ ಶಾಲೆ ಪ್ರಥಮ, ಹಿರಿಯಡ್ಕ ಶಾಲೆ ದ್ವಿತೀಯ ಸ್ಥಾನದಲ್ಲಿದೆ.
ಬ್ರಹ್ಮಾವರ ಶಾಲೆಯಲ್ಲಿ 1,498 ವಿದ್ಯಾರ್ಥಿಗಳು, ಮುನಿಯಾಲು ಶಾಲೆಯಲ್ಲಿ 1,117 ವಿದ್ಯಾರ್ಥಿಗಳು, ಹಿರಿಯಡ್ಕ ಶಾಲೆಯಲ್ಲಿ 1,028 ವಿದ್ಯಾರ್ಥಿಗಳು, ಕೋಟೇಶ್ವರ ಶಾಲೆಯಲ್ಲಿ 964 ವಿದ್ಯಾರ್ಥಿಗಳು, ಬಿದ್ಕಲ್ಕಟ್ಟೆ ಶಾಲೆಯಲ್ಲಿ 1184 ವಿದ್ಯಾರ್ಥಿಗಳು, ಕೊಕ್ಕರ್ಣೆ ಶಾಲೆಯಲ್ಲಿ 788 ವಿದ್ಯಾರ್ಥಿಗಳು, ಹೊಸಮಾರು ಶಾಲೆಯಲ್ಲಿ 510 ವಿದ್ಯಾರ್ಥಿ ಗಳು, ಪಡುಬಿದ್ರಿ ಶಾಲೆಯಲ್ಲಿ 487 ವಿದ್ಯಾರ್ಥಿಗಳು, ವಂಡ್ಸೆ ಶಾಲೆಯಲ್ಲಿ 351 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಈ ವರ್ಷ ಕರ್ನಾಟಕ ಪಬ್ಲಿಕ್ ಸ್ಕೂಲ್ನ ದಾಖಲಾತಿಯಲ್ಲಿ ಎಲ್ಕೆಜಿ ನಿಂದ 336 ಹಾಗೂ ಯುಕೆಜಿಯಿಂದ 319 ಮಕ್ಕಳು ಪ್ರವೇಶ ಪಡೆದಿದ್ದಾರೆ.
1ನೇ ತರಗತಿಯಲ್ಲಿ 315 ವಿದ್ಯಾರ್ಥಿಗಳು, 2ನೇ ತರಗತಿಯಲ್ಲಿ 369 ವಿದ್ಯಾರ್ಥಿಗಳು, 3ನೇ ತರಗತಿಯಲ್ಲಿ 436 ವಿದ್ಯಾರ್ಥಿಗಳು, 4ನೇ ತರಗತಿಯಲ್ಲಿ 478 ವಿದ್ಯಾರ್ಥಿಗಳು, 5ನೇ ತರಗತಿಯಲ್ಲಿ 526 ವಿದ್ಯಾರ್ಥಿಗಳು, 6ನೇ ತರಗತಿಯಲ್ಲಿ 628 ವಿದ್ಯಾರ್ಥಿಗಳು, 7ನೇ ತರಗತಿಯಲ್ಲಿ 628 ವಿದ್ಯಾರ್ಥಿಗಳು, 8ನೇ ತರಗತಿಯಲ್ಲಿ 824 ವಿದ್ಯಾರ್ಥಿಗಳು, 9ನೇ ತರಗತಿಯಲ್ಲಿ 793, 10ನೇ ತರಗತಿಯಲ್ಲಿ 992 ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಪ್ರಥಮ ಪಿಯುಸಿಯಲ್ಲಿ 828 ಹಾಗೂ ದ್ವಿತೀಯ ತರಗತಿಯಲ್ಲಿ 848 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.






