1227 ವಿದ್ಯಾರ್ಥಿಗಳಿಗೆ 1.38ಕೋ.ರೂ. ವಿದ್ಯಾಪೋಷಕ್ ಸಹಾಯಧನ ವಿತರಣೆ

ಉಡುಪಿ, ಅ.5: ಉಡುಪಿ ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ವಿದ್ಯಾ ಪೋಷಕ್ ವತಿಯಿಂದ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ರವಿವಾರ ನಡೆದ 21ನೇ ವರ್ಷದ ವಿನಮ್ರ ಸಹಾಯಧನ ವಿತರಣಾ ಕಾರ್ಯ ಕ್ರಮದಲ್ಲಿ ವಿದ್ಯಾಪೋಷಕ್ ಹಾಗೂ ಯಕ್ಷಗಾನ ಕಲಾವಿದರ ಮಕ್ಕಳು ಸೇರಿದಂತೆ ಒಟ್ಟು 1227 ವಿದ್ಯಾರ್ಥಿಗಳಿಗೆ 1,38,15,500ರೂ. ಸಹಾಯ ಧನ ಹಾಗೂ 10 ಮಂದಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು.
ಸಹಾಯಧನ ವಿತರಿಸಿದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಮಾತನಾಡಿ, ನಾವು ಇಂದು ಸ್ವಂತ ಚಿಂತನೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಎಲ್ಲರು ಒಂದೇ ದಾರಿಯಲ್ಲಿ ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮಾಡುವವರೇ ಇಲ್ಲ. ಏಕಮುಖಿ ಚಿಂತನೆಯಿಂದ ಸಮಾಜ ಸಮಾತೋಲನ ತಪ್ಪಿ ಹೋಗುವ ಆತಂಕ ಕಾಡುತ್ತಿದೆ ಎಂದರು.
ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಹಾಗೂ ಸ್ವಂತಿಕೆ ಅರಳುವಂತಹ ಕ್ಷೇತ್ರವನ್ನು ಆರಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸ್ವಂತ ಚಿಂತನೆಯನ್ನು ಬೆಳೆಸಿ ಕೊಳ್ಳಬೇಕು. ಇದರಿಂದ ಸಮಾಜ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ. ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಸಿಕ್ಕಿದರೆ ಸರಿಯಾದ ಜೀವನ ನಡೆಸಲು ಸಾಧ್ಯವಾಗುತ್ತದೆ. ಡಾಕ್ಟರ್ ಇಂಜಿನಿಯರ್ ವ್ಯಾಮೋಹ ದಿಂದ ಸಮೂಹಬ ಸನ್ನಿಗೆ ಒಳಗಾದರೆ ಜೀವನ ಹಾಳಾಗುತ್ತದೆ ಎಂದು ಅವರು ತಿಳಿಸಿದರು.
ಡಿಆರ್‌ಎಂ ಇನ್‌ಫೋಸಿಸ್ ಮಂಗಳೂರಿನ ಉಪಾಧ್ಯಕ್ಷ ವಾಸುದೇವ ಕಾಮತ್ ಲ್ಯಾಪ್‌ಟಾಪ್ ವಿತರಿಸಿದರು. ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು.
ನಿವೃತ್ತ ಐಟಿ ಉದ್ಯೋಗಿ ಗಿರೀಶ್ ಭಟ್ ಕಾರ್ಕಳ, ರವಿರಾಜ್ ಬೆಳ್ಮ, ಲಕ್ಷ್ಮೀಪತಿ, ಭೀಮಾ ಜ್ಯುವೆಲ್ಲರ್ಸ್‌ನ ಶ್ರೀಪತಿ ಭಟ್, ಕರ್ಜೆ ಶ್ರೀಮಹಾ ಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಐಟಿ ಉದ್ಯಮಿ ಹರೀಶ್ ರಾಯಸ್, ಉಡುಪಿ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಹರಿಶ್ಚಂದ್ರ, ಉದ್ಯಮಿಗಳಾದ ಅರುಣ್ ಕುಮರ್ ಶೆಟ್ಟಿ, ಆನಂದ ಪಿ.ಸುವರ್ಣ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಆನಂದ ಸಿ.ಕುಂದರ್, ನಿವೃತ್ತ ಬ್ಯಾಂಕ್ ಉದ್ಯೋಗಿ ಅಶೋಕ್ ನಾಯಕ್, ಕಲಾರಂಗದ ಉಪಾಧ್ಯಕ್ಷ ವಿ.ಜಿ.ಶೆಟ್ಟಿ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
ಸಹಾಯಧನ ವಿತರಣಾ ಸಮಾರಂಭ ಉದ್ಘಾಟನೆ
ವಿದ್ಯಾಪೋಷಕ್‌ನ 21ನೇ ವರ್ಷದ ವಿನಮ್ರ ಸಹಾಯಧನ ವಿತರಣಾ ಸಮಾರಂಭವನ್ನು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ವಹಿಸಿದ್ದರು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಶುಭಾಶಂಸನೆಗೈದರು.
ಒಎನ್‌ಜಿಸಿ ಮುಂಬೈನ ನಿವೃತ್ತ ಸಿಜಿಎಂ ಬನ್ನಾಡಿ ನಾರಾಯಣ ಆಚಾರ್, ಉಡುಪಿ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ, ವೈದ್ಯರಾದ ಡಾ.ಜೆ.ಎನ್.ಭಟ್, ಡಾ.ಪಿ.ಎಸ್.ಗುರು ಮೂರ್ತಿ, ಯು.ಎಸ್.ನಾಯಕ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ವಿಶ್ವಸ್ಥ ಪಿ.ಸುರೇಶ್ ನಾಯಕ್, ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿವೃತ್ತ ನಿರ್ದೇಶಕ ಡಾ.ಎಂ.ಆರ್.ಹೆಗಡೆ, ಉಡುಪಿ ಎ.ಸಿ.ಸಿ.ಇ.ಎ. ಅಧ್ಯಕ್ಷ ಯೋಗೀಶ್‌ಚಂದ್ರಾಧರ್, ಆರ್ಥಿಕ ತಜ್ಞ ರಾಮ ಕೆ.ಶಿರೂರು, ಉದ್ಯಮಿ ಲಕ್ಷ್ಮಣ ಬಿ.ಅಮೀನ್, ವಿಶ್ವನಾಥ ಶೆಣೈ, ಹುಬ್ಬಳ್ಳಿ ಮೈಲೈಫ್‌ನ ಸಂಸ್ಥಾಪಕ ಪ್ರವೀಣ್ ಗುಡಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಪಿ.ಸದಾನಂದ ಶೆಣೈ ಉಪಸ್ಥಿತರಿದ್ದರು.
ಕಲಾರಂಗದ ಉಪಾಧ್ಯಕ್ಷ ವಿ.ಜಿ.ಶೆಟ್ಟಿ ಸ್ವಾಗತಿಸಿದರು. ನಾರಾಯಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.







